ಬೆಂಗಳೂರು : ದೇವೇಗೌಡರು ಅಪಾರ ಜನ ಸೇವೆ ಮಾಡಿದ್ದಾರೆ.ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದು, ಅವರ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದರು. ಡಿಸಿಎಂ ಡಿಕೆಶಿವಕುಮಾರ್ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆದರು. ಈ ವೇಳೆ ದೇವೇಗೌಡರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ,ನಾವು ಕಾಂಗ್ರೆಸ್ ಪಕ್ಷದವರು ನುಡಿದಂತೆ ನಡೆಯುತ್ತೇವೆ, ನಾನು ಸದಾ ಸಕಾರಾತ್ಮಕವಾಗಿ ಆಲೋಚಿಸುತ್ತೇನೆಯೇ ಹೊರತು ಋಣಾತ್ಮಕವಾಗಿ ಆಲೋಚಿಸುವುದಿಲ್ಲ ಎಂದು ತಿಳಿಸಿದರು.
ಕಾವೇರಿ ನೀರು ಹೇಗೆ ರಕ್ಷಿಸಬೇಕು ಹೇಗೆ ಬಳಸಿಕೊಳ್ಳಬೇಕು ಎಂದು ದೇವೇಗೌಡರ ಬಳಿ ಚರ್ಚಿಸಿದ್ದು ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ದೇವೇಗೌಡರ ಬಳಿ ನಡೆಸಿದ್ದ ಮಾತುಕತೆ ಬಗ್ಗೆ ವಿವರಿಸಿದರು. ಎಲೆಕ್ಷನ್ ರಾಜಕೀಯ ಮುಕ್ತಾಯವಾಗಿದೆ, ಇನ್ನು ರಾಜ್ಯದ ಹಿತ ಕಾಪಾಡಲು ಗಮನಹರಿಸಬೇಕು ,ಈ ವಿಚಾರವಾಗಿ ಸಲಹೆ ಪಡೆದಿದ್ದೇವೆ, ಅವರು ಬಹಳ ಸ್ಪೂರ್ತಿಯಿಂದ ಆಶೀರ್ವದಿಸಿದ್ದಾರೆ ಎಂದರು.