ಬೆಂಗಳೂರು : ಸನಾತನ ಧರ್ಮದ ಕುರಿತು ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ತಿರುಚಿ ತಮ್ಮ ಸಾಮಾಜಿಕ ಜಾಲತಾಣ ಟ್ಟಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಜನರ ಮಧ್ಯೆ ವೈಷಮ್ಯದ ಭಾವನೆ ಮೂಡಿಸುವ ಉದ್ದೇಶದಿಂದ ಉದಯನಿಧಿ ನೀಡಿದ್ದ ಹೇಳಿಕೆಯನ್ನು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆಂದು ಐಪಿಸಿಯ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ಸಂಸತ್ತಿನ ಕಾರ್ಯಗಳನ್ನು ಸೋನಿಯಾ ರಾಜಕೀಯಗೊಳಿಸ್ತಿದ್ದಾರೆ’
ಡಿಎಂಕೆ ಪಕ್ಷದ ಕಾನೂನು ವಿಭಾಗದ ಕೆ.ಎ.ವಿ.ದಿನಕರನ್ ಎಂಬುವವರ ದೂರಿನ ಆಧಾರದ ಮೇಲೆ ಅಮಿತ್ ಮಾಳವೀಯ ವಿರುದ್ಧ ಐಪಿಸಿಯ ವಿವಿಧ ಕಾಯ್ದೆಗಳಾಗಿರುವ 153ಎ, 504,505 1(ಬಿ)ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿರುಚಿನಾಪಳ್ಳಿಯ ಪೊಲೀಸರು ತಿಳಿಸಿದ್ದಾರೆ.
ಉದಯನಿಧಿ ಹೇಳಿಕೆಯ ವೀಡಿಯೋವನ್ನು ಅಮಿತ್ ಮಾಳವಿಯಾ ತಮ್ಮ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಡಿಎಂಕೆ ನಾಯಕ “ಜನಾಂಗೀಯ ಹತ್ಯೆ”ಗೆ ಕರೆ ನೀಡಿದ್ದಾರೆ ಎಂದು ಬರೆದಿದ್ದರು. ಶೇ80ರಷ್ಟು ಜನಸಂಖ್ಯೆಯು ಸನಾತನ ಧರ್ಮವನ್ನು ಅನುಸರಿಸುತ್ತದೆ. ಇದು ಜನರಲ್ಲಿ ಜನಾಂಗೀಯ ಹತ್ಯೆಗೆ ನೀಡಿದ ಕರೆಯಾಗಿದೆ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು.
ಉದಯನಿಧಿ ಸ್ಟಾಲಿನ್ ಏನು ಹೇಳಿದ್ದರು..?
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿದ ನಂತರ ರಾಜಕೀಯ ವಲಯದಲ್ಲಿ ವಾಗ್ವಾದಗಳು ನಡೆದಿವೆ. ಚೆನ್ನೈನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ, ಇಂತಹ ವಿಷಯಗಳನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.