ಬೆಂಗಳೂರು: ಡಿಎಂಕೆ ಮುಖಂಡನ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ.
ಮಧುರೈ ಕಾರ್ಪೊರೇಷನ್‌ನ ಡಿಎಂಕೆ ಮಂಡಲದ ಮಾಜಿ ಅಧ್ಯಕ್ಷ ವಿ.ಕೆ.ಗುರುಸ್ವಾಮಿ ಎಂಬುವರು ಇಲ್ಲಿನ ಹೋಟೆಲ್‌ವೊಂದರ ಬಳಿ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ಗುರುಸ್ವಾಮಿ ಅವರ ತಲೆ ಸೇರಿ ಹಲವು ಕಡೆಗಳಲ್ಲಿ ಗಾಯಗಳಾಗಿವೆ.
ದುಷ್ಕರ್ಮಿಗಳು ತಮಿಳುನಾಡಿನಿಂದ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದ್ದು, ಐದು ಮಂದಿ ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗುರುಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುಸ್ವಾಮಿ ಅವರೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿದ್ದು, ಹಲವು ಕೇಸ್‌ಗಳು ದಾಖಲಾಗಿದ್ದವು. ಮಧುರೈನಲ್ಲಿ ಸಾಕಷ್ಟು ದ್ವೇಷ ಕಟ್ಟಿಕೊಂಡಿದ್ದರು. ಜೀವ ಬೆದರಿಕೆ ಇದ್ದ ಕಾರಣ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಜೀವ ಬೆದರಿಕೆ ಇದ್ದ ಕಾರಣಕ್ಕೆ ತಲೆಮರಿಸಿಕೊಳ್ಳಲು ಬೆಂಗಳೂರಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಂಗಳೂರಿಗೆ ಬಂದಿದ್ದ ಅವರ ಹತ್ಯೆಗೆ ಸ್ಕೆಚ್ ಹಾಕಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.