ರಷ್ಯಾ : ವಿಮಾನ ಅಪಘಾತದಲ್ಲಿ ಮೃತಪಟ್ಟ 10 ಜನರಲ್ಲಿ ವ್ಯಾಗ್ನರ್ ಗುಂಪಿನ ಸಂಸ್ಥಾಪಕ ಯೆವ್ಗೆನಿ ಪ್ರಿಗೊಜಿನ್ ಕೂಡ ಸೇರಿದ್ದಾರೆ ಎಂಬುವುದು ಅನುವಂಶಿಕ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ.
ಮಾಸ್ಕೋದ ಉತ್ತರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಯೆವ್ಗೆನಿ ಪ್ರಿಗೊಜಿನ್ ಮೃತಪಟ್ಟಿದ್ದಾರೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಹಿಂದೆ ಹೇಳಿತ್ತು.
ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಘಟನೆಯನ್ನು ‘ದುರಂತ’ ಎಂದು ಹೇಳಿದ್ದು, ಪ್ರಿಗೊಜಿನ್ ಅವರನ್ನು ಹತ್ಯೆ ಮಾಡಲಾಗಿದೆ ಎಂಬುವುದನ್ನು ತಳ್ಳಿ ಹಾಕಿದ್ದಾರೆ. ವಿಮಾನ ಅಪಘಾತದ ನಂತರ ರಷ್ಯಾದ ಅಧಿಕಾರಿಗಳು ವಾಯು ಸಂಚಾರ ಉಲ್ಲಂಘನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಮಾಸ್ಕೊದ ಟ್ವೆರ್ ಪ್ರದೇಶದಲ್ಲಿ ವಿಮಾನ ಅಪಘಾತದ ತನಿಖೆಯ ಭಾಗವಾಗಿ ಅನುವಂಶಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತನಿಖಾ ಸಮಿತಿಯ ವಕ್ತಾರ ಸ್ವೆಟ್ಲಾನಾ ಪೆಟ್ರೆಂಕೊ ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಎಲ್ಲಾ ಮೃತದೇಹಗಳ ಅನಿವಂಶಿಕ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ನಾವು ಅಂದುಕೊಂಡಂತೆ ಫಲಿತಾಂಶ ಬಂದಿದೆ ಎಂದು ಪೆಟ್ರೆಂಕೊ ತಿಳಿಸಿದ್ದಾರೆ.
ವ್ಯಾಗ್ನರ್ ಗುಂಪು ಒಂದು ರೀತಿ ರಷ್ಯಾದ ಪ್ಯಾರಾ ಮಿಲಿಟರಿ ಪಡೆಯಾಗಿದೆ. ಮೂಲತಃ ಖಾಸಗಿ ಮಿಲಿಟರಿ ಕಂಪನಿ ಮತ್ತು ಕೂಲಿ ಕಾರ್ಮಿಕರ ಜಾಲವಾಗಿರುವ ವ್ಯಾಗ್ನರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೆಚ್ಚು ಆಪ್ತವಾಗಿತ್ತು. ಆದರೆ, ಕೆಲ ತಿಂಗಳ ಹಿಂದೆ ಪುಟಿನ್ ಸರ್ಕಾರದ ವಿರುದ್ದವೇ ವ್ಯಾಗ್ನರ್ ಪಡೆ ತೊಡೆ ತಟ್ಟಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ವ್ಯಾಗ್ನರ್ ಪಡೆಯ ಮುಖ್ಯಸ್ಥ ಪ್ರಿಗೊಜಿನ್ ಸಾವನ್ನಪ್ಪಿರುವುದು ರಷ್ಯಾ ಸರ್ಕಾರದ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.