ಬೆಂಗಳೂರು: ‘ಸೌಜನ್ಯ ತಾಯಿಗೆ ನಾವು ನ್ಯಾಯ ಕೊಡಿಸಲು ಆಗುವುದಿಲ್ಲ. ಆದರೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗಲೇಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.
11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆಸಿದ್ದ ಪಿಯು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿರುವ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ಇಂದು ಫ್ರೀಡಂಪಾರ್ಕಿನಲ್ಲಿ ಸಮಾವೇಶ ನಡೆಸಿದರು.
ಈ ಬಗ್ಗೆ ಮಾತನಾಡಿದ ರವಿ ಕೃಷ್ಣಾರೆಡ್ಡಿ, ‘ಪಾದಯಾತ್ರೆಯ ಪ್ರಾರಂಭದಿಂದ ನಾನು ಮೌನವಾಗಿದ್ದೆ. ಮೌನವಾಗಿದ್ದುಕೊಂಡೇ ಪಾದಯಾತ್ರೆ ಮಾಡಿದ್ದೇನೆ. ಕಳೆದ 11 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನಾವು ಸೌಜನ್ಯ ತಾಯಿಗೆ ನ್ಯಾಯ ಕೊಡಿಸಲು ಆಗುವುದಿಲ್ಲ. ಆದರೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗಲೇಬೇಕು’ ಎಂದರು.
ಇದನ್ನೂ ಓದಿ; ‘ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ವಿರೋಧವಿಲ್ಲ; ಐ ವಿಶ್ ದೆಮ್ ಆಲ್ ದಿ ಬೆಸ್ಟ್’
‘ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಕುಟುಂಬದ ಜೊತೆ ನಿಂತಿದ್ದಾರೆ. ಸೌಜನ್ಯ ವಿಚಾರದಲ್ಲಿ ನ್ಯಾಯ ಕೇಳಲು ಯಾವುದೇ ಸಂಘಟನೆ ಧರ್ಮಸ್ಥಳಕ್ಕೆ ಹೋಗಿಲ್ಲ. ಈಗಲೂ ಹಲವರ ಮನೆಯಲ್ಲಿ ಧರ್ಮಸ್ಥಳ ಮಂಜುನಾಥ ಹಾಗೂ ವೀರೇಂದ್ರ ಹೆಗ್ಗಡೆಯವರ ಫೋಟೋ ಇದೆ. ರಾಜ್ಯದ ಹೆಚ್ಚು ಜನರು ಭೇಟಿ ನೀಡುವ ಜಾಗ ಧರ್ಮಸ್ಥಳ. ಧರ್ಮ ಇರುವಂತಹ ಸ್ಥಳ ಧರ್ಮಸ್ಥಳ; ಆದರೆ ಅಲ್ಲೆ ಅಧರ್ಮ ಮನೆ ಮಾಡಿದೆ. ದೇವರ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ವಂಚನೆ ಆಗುತ್ತಿದೆ’ ಎಂದು ಕಿಡಿಕಾರಿದರು.
ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ‘ನನ್ನ ಮಗಳ ಸಾವಿಗೆ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ. ನನ್ನ ಮಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಪಾದಯಾತ್ರೆ ಮಾಡಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಗೆ ಇದೆ. ನನ್ನ ಮಗಳನ್ನು ಅತ್ಯಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಮಾಡಿದವರು ಜೀವಂತವಾಗಿ ನನ್ನ ಮಗಳನ್ನು ಬಿಡಬೇಕಿತ್ತು. ಸೌಜನ್ಯ ಜೀವಂತವಾಗಿ ಇದ್ದಿದ್ದರೆ ನಾನೇ ನೋಡಿಕೊಳ್ಳುತ್ತಿದ್ದೆ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಂದವರಿಗೆ ಸಹಕರಿಸುತ್ತಿರುವವರಿಗೆ ಶಿಕ್ಷೆ ಆಗಬೇಕ’ ಎಂದು ಆಗ್ರಹಿಹಿಸಿದರು.
ಇದನ್ನೂ ಓದಿ; ಇಬ್ಬರು ಅಸಹಾಯಕರು ಒಂದಾಗ್ತಿದ್ದಾರೆ : ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೆಟ್ಟರ್ ವ್ಯಂಗ್ಯ
ತನಿಖೆಗೆ ಒತ್ತಾಯಿಸಿ 14 ದಿನ ಪಾದಯಾತ್ರೆ:
ಸೌಜನ್ಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಮರುತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿ ಕೆ ಆರ್ ಎಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಯಿತು. ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ, ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ 14 ದಿನಗಳವರೆಗೆ ‘ದೌರ್ಜನ್ಯದ ವಿರುದ್ಧ ಸೌಜನ್ಯ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.