ವಿಜಯಪುರ: ನಾನು ನಮ್ಮ ಪಕ್ಷದ ಯಾವ ನಾಯಕರ ಬಗ್ಗೆಯೂ ಮಾತನಾಡಲ್ಲ. ಇನ್ಮೇಲೆ ಏನಿದ್ರೂ ವಿರೋಧಿ ಪಕ್ಷದವರ ವಿರುದ್ಧ ಮಾತ್ರ ಮಾತನಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿರಿಯರು, ಅವರ ಬಗ್ಗೆ ಮಾತನಾಡಬೇಡಿ. ಜೊತೆಗೆ ಚಿಲ್ಲರೆ ನಾಯಕರ ಬಗ್ಗೆ ಕೂಡ ಪ್ರತಿಕ್ರಿಯಿಸಬೇಡಿ ಎಂದು ಹೈಕಮಾಂಡ್ ನನಗೆ ಹೇಳಿದೆ. ಹೀಗಾಗಿ ನಾನು ಮಾತಾಡಲ್ಲ ಎಂದರು.
ವಿಜಯಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕ್ರಮಕ್ಕೆ ನಾನು ಬರಲು ಆಗಲ್ಲ ಎಂದು ನಡ್ಡಾ ಅವರಿಗೆ ಹೇಳಿದ್ದೆ. ಅವರ ಪರವಾನಿಗೆ ಪಡೆದೇ ನಾನು ಗೈರಾಗಿದ್ದೇನೆ ಎಂದರು. ಸಿಡಿ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ. ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ. ಇದ್ರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ ಎಂದು ಒತ್ತಾಯಿಸಿದರು.