ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಕಾವೇರಿ ನೀರು ಹಂಚಿಕೆ ನಿರ್ಧಾರ ಕೈಗೊಳ್ಳುವಂತೆ 2018ರಲ್ಲೇ ಸುಪ್ರೀಂ ಕೊರ್ಟ್ ಫೈನಲ್ ತೀರ್ಪು ಕೊಟ್ಟಿದೆ. ಇದರಲ್ಲಿ ಪ್ರಧಾನಿಯವರನ್ನ ಎಳೆಯೋದು ಬೇಡ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆ ನಂತರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನಾಮ್ಮ ಪಕ್ಷದಿಂದಲೂ ಮೂರು ನಾಲ್ಕು ಜನ ಸಂಸದರು ಬಾಗಿಯಾಗಿದ್ದೆವು. ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಿಡಬ್ಲ್ಯೂಆರ್‌ಸಿ ಸೆ.12ರಿಂದ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹೊರಡಿಸಿದೆ. ಬಹುಶಃ ನಾಳೆ ಮತ್ತೆ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ. ಹಿಂದಿನ ತೀರ್ಮಾನಕ್ಕೆ ತಡೆ ನೀಡುವ ಸಾದ್ಯತೆ ಇದೆ’ ಎಂದರು.
ಇದನ್ನೂ ಓದಿ; ತಮಿಳುನಾಡಿಗೆ ಬಿಡಲು ನಮ್ಮಲ್ಲಿ ನೀರಿಲ್ಲ, ಪ್ರಧಾನಿಗೆ ಪತ್ರ ಬರೆಯುತ್ತೇವೆ : ಸಿಎಂ ಸಿದ್ದರಾಮಯ್ಯ
‘ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೊರ್ಟ್‌ನಲ್ಲಿ 21ರಂದು ವಿಚಾರಣೆಯಿದೆ. ತಮಿಳುನಾಡಿನವರು ಸುಪ್ರೀಂಕೊರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅಲ್ಲಿಯವರೆಗೆ ಈ ವಿಚಾರವನ್ನ ‘ಹಾನರ್’ ಮಾಡಬೇಕಾ ಬೇಡ್ವಾ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ನಾವು ಮುಖ್ಯಮಂತ್ರಿ ಅವರಿಗೆ ರಾಜ್ಯದ ಜನರ ಹಿತರಕ್ಷಣೆ ಮಾಡುವಂತೆ ಹೇಳಿದ್ದೇವೆ. ನಾವು ಅದಕ್ಕೆ ಬದ್ಧರಾಗಿದ್ದೇವೆ’ ಎಂದರು.
‘ಆದರೆ, 5 ಸಾವಿರ ಕ್ಯೂಸೆಕ್ ನೀರು ಬಿಡುವ ತೀರ್ಮಾನ ಬೇಡ. ನಮಗೆ ಬೇಕಾಗಿರುವಷ್ಟು ನೀರಿಲ್ಲ. ಈಗಾಗಲೇ ಬೆಳೆದುನಿಂತಿರುವ ಬೆಳೆ ಇದೆ; ಎಷ್ಟೊ ಕಡೆ ನಾಟಿ ಕೆಲಸನೇ ಆರಂಭವಾಗಿಲ್ಲ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರಕ್ಕೆ ಪ್ರತಿ ದಿನ 1 ಸಾವಿರ ಕ್ಯುಸೆಕ್ ಕುಡಿಯುವ ನೀರು ಬೇಕು. ಕಾವೇರಿ ಕೊಳ್ಳದಲ್ಲಿ ಮಳೆ ಬರೋ ಲಕ್ಷಣ ಕಾಣಿಸುತ್ತಿಲ್ಲ. ಬೆಂಗಳೂರಿಗೆ 12 ಟಿಎಂಸಿ ನೀರು ಬೇಕಿದೆ’ ಎಂದು ಹೇಳಿದರು.
ಇದನ್ನೂ ಓದಿ; ತಮಿಳುನಾಡಿಗೆ ಧಿಕ್ಕಾರ, ಕಾವೇರಿ ನೀರು ಬಿಡಲು ಆಗಲ್ಲ : ವಾಟಾಳ್ ನಾಗರಾಜ್
‘ಸುಪ್ರೀಂ ಕೊರ್ಟ್ ಗೆ ಮತ್ತೊಂದು ಅರ್ಜಿ ಹಾಕಿ ಎಂದು ನಾವು ಸ್ಪಷ್ಟ ಪಡಿಸಿದ್ದೇವೆ. ಸುಪ್ರೀಂಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುತ್ತೆ. ಸಿಡಬ್ಲ್ಯೂಆರ್‌ಸಿ ಹಾಗೂ ಸಿಡಬ್ಲ್ಯೂಎಂಎಗೆ 2018ರಲ್ಲೇ ಅಧಿಕಾರ ನೀಡಿ ಸುಪ್ರೀಂ ಕೊರ್ಟ್ ಅಂತಿಮ ತೀರ್ಪು ಕೊಟ್ಟಿದೆ. ಈ ವಿಚಾರದಲ್ಲಿ ಪ್ರಧಾನಿಯವರನ್ನು ಎಳೆಯೋದು ಬೇಡ. ತಮಿಳುನಾಡಿನವರು ಸುಪ್ರೀಂಕೊರ್ಟ್ ಮೂಲಕವೇ ನ್ಯಾಯ ಕೇಳ್ತಿದ್ದಾರೆ. ನಾವು ನಮ್ಮ ವಾದವನ್ನ ಬಲವಾಗಿ ಮಂಡಿಸಿ ನ್ಯಾಯ ಪಡೆದುಕೊಳ್ಳಬೇಕು’ ಎಂದರು.
‘ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಕರ್ನಾಟಕ ಹಿತರಕ್ಷಣೆ ಪರವಾಗಿ ಇದ್ದೇವೆ. ಮೇಕೆದಾಟಿನಲ್ಲಿ ಇನ್ನೊಂದು ಡ್ಯಾಂ ಕಟ್ಟಬೇಕೆಂದರೆ ನಾವು ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗ್ತಿವಿ. ನಮಗೆ ನಮ್ಮ ರೈತರ ಹಿತ ಮುಖ್ಯ, ಸಮಿತಿ ತೀರ್ಮಾನಕ್ಕೆ ನಮ್ಮ ವಿರೋಧವಿದೆ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.