Sunday, October 1, 2023
spot_img
- Advertisement -spot_img

ಓಟಿಗೋಸ್ಕರ ಪ್ರತಿಭಟನೆ ಮಾಡ್ಬೇಡಿ, ರೈತರ ಸಮಸ್ಯೆ ಬಗೆಹರಿಸಿ : ಪ್ರಜ್ವಲ್ ರೇವಣ್ಣ

ಸಕಲೇಶಪುರ : ‘ಓಟಿಗೋಸ್ಕರ ಪ್ರತಿಭಟನೆ ಮಾಡ್ಬೇಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾರ್ಯ ಮಾಡಿ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲಾ ಪಾರ್ಟಿಯ ಸಂಸದರನ್ನು ಕರೆದು ಟ್ರಿಬ್ಯುನಲ್ ಕಮಿಟಿ ರಚಿಸಿ ಚರ್ಚೆ ಮಾಡಬೇಕು. ವಿವಾದವನ್ನು ರಸ್ತೆಗೆ ಎಳೆದು ತಂದು ಜಗಳ ಮಾಡಿಸುವುದಲ್ಲ. ನಮ್ಮ ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ ಎಂದು ಹಲವಾರು ಬಾರಿ ಸಂಸತ್ ಕಲಾಪದಲ್ಲೂ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಬಹಳ ಪ್ರಶ್ನೆಗಳನ್ನು ಕೇಳಿದ್ದೇನೆ. ಒಮ್ಮೆ ಅಣ್ಣಾಮಲೈಗೆ ಚಾಲೆಂಜ್ ಕೂಡ ಮಾಡಿದ್ದೆ ಎಂದರು.

ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಅರ್ಥ ಆಗ್ತಿಲ್ಲ. ನಾನು ಯಾವುದೇ ಪಕ್ಷ, ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ. ಮುಂದೆ ಎಂಪಿ ಎಲೆಕ್ಷನ್ ಬರ್ತಿದೆ ಅನ್ನುವ ಕಾರಣಕ್ಕೆ ಓಟಿಗೋಸ್ಕರ ಪ್ರತಿಭಟನೆ ಮಾಡಬಾರದು. ಒಂದು ಕಡೆ ಅಣ್ಣಾಮಲೈ ಅವರು ನಾನು ನೀರು ತಂದೆ ತರ್ತೀನಿ ಅಂತ ಟೇಬಲ್ ಕುಟ್ಟುತ್ತಾರೆ. ಇಲ್ಲಿ ಬಿಜೆಪಿಯವರು ನೀರು ಬಿಡಬೇಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾದರೆ, ಅಣ್ಣಾಮಲೈ ಯಾವ ಪಕ್ಷದಲ್ಲಿದ್ದಾರೆ, ಅವರ ನಿಲುವೇನು?. ತಮಿಳುನಾಡು ಬಿಜೆಪಿ ಬೇರೆ, ಕರ್ನಾಟಕ ಬಿಜೆಪಿ ಬೇರೆ ಇದೆಯಾ ಎನ್ನುವುದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಎತ್ತಿನಹೊಳೆ ಕಾಮಗಾರಿ ಪ್ರಗತಿ ಸಮಾಧಾನ ತಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ನಿಜವಾಗಲೂ ನಮಗೆ ತೊಂದರೆಯಾಗುತ್ತಿದೆ. ಹೇಮಾವತಿ ನದಿ ಇನ್ನೂ ತುಂಬಿಲ್ಲ. ಈ ಬಾರಿ ಮಳೆಯ ಪ್ರಮಾಣವು ಕಡಿಮೆ ಆಗಿದೆ. ಇವೆಲ್ಲಾ ಸಮಸ್ಯೆಗಳಿವೆ. ಒಂದು ಸಾರಿ ಬೆಳೆಗೆ ನೀರು ಕೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಸರಿಯಾದ ಹೇಳಿಕೆ ಅಲ್ಲ. ಕೇಂದ್ರ ಸರ್ಕಾರ ಎರಡು ರಾಜ್ಯಗಳ ಸಿಎಂ, ಸಂಸದರನ್ನೊಳಗೊಂಡ ಕಮಿಟಿ ರಚಿಸಬೇಕು. ಬಿಜೆಪಿಯವರು ಮೂರುವರೆ ವರ್ಷ ಆಡಳಿತದಲ್ಲಿ ಇದ್ದಾಗ ರಿಟ್ ಅರ್ಜಿ ಏಕೆ ಹಾಕಿಲ್ಲ?. ಅವರ ಮೇಲೆ ಇವರು, ಇವರ ಮೇಲೆ ಅವರು ದೂರು ಹೇಳುವುದರಿಂದ ಪ್ರಯೋಜನ ಆಗಲ್ಲ. ಎಲ್ಲದಕ್ಕೂ ಫುಲ್‌ಸ್ಟಾಪ್ ಬೇಕಲ್ಲ ಎಂದರು.

ರಾಜಕಾರಣದಲ್ಲಿ ತಮಿಳುನಾಡು-ಕರ್ನಾಟಕದವರು ಮುಖ ಮುಖ ನೋಡದೆ ಇರುವ ಪರಿಸ್ಥಿತಿ ಬಂದಿದೆ. ಇದರಲ್ಲಿ ರೈತರು ಹೊಡೆತ ತಿನ್ನುತ್ತಿದ್ದಾರೆ. ರಾಜಕಾರಣ ಬದಿಗಿಟ್ಟು ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಇದಕ್ಕೊಂದು ಸಮಿತಿ ಮಾಡಿ ಹಿರಿಯರು, ಎರಡು ರಾಜ್ಯದ ಸಿಎಂಗಳು, ಎಲ್ಲಾ ಪಕ್ಷದ ಸಂಸದರು, ರಾಜ್ಯಸಭಾ ಸದಸ್ಯರನ್ನು ಕೂರಿಸಿ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles