ಶಿವಮೊಗ್ಗ: ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಖಂಡಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಖಾನೆ ಸ್ಥಗಿತವು 20 ಸಾವಿರ ಮಂದಿಯ ಜೀವನವನ್ನು ಕಸಿದುಕೊಳ್ಳುವುದು ಮಾತ್ರವಲ್ಲ ರಾಜ್ಯದ ಏಕೈಕ ಸರ್ಕಾರಿ ಉಕ್ಕಿನ ಕಾರ್ಖಾನೆ ಇಲ್ಲದಂತೆ ಮಾಡಲಿದೆ. ಕಾರ್ಖಾನೆ ಪುನಶ್ಚೇತನಗೊಳಿಸಲು ಅನುವಾಗುವಂತೆ ನಮ್ಮ ಸರ್ಕಾರ 150 ಎಕರೆ ಗಣಿ ಜಾಗ ನೀಡಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಯನ್ನೇ ಇಲ್ಲದಂತೆ ಮಾಡಲು ಹೊರಟಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಹೀಗಾಗಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕಾರ್ಖಾನೆಯನ್ನೂ ಮುಚ್ಚುತ್ತಿರುವುದು ಯಾಕೆ? ಈ ಭಾಗದ ಜನ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರ ಹಿತ ರಕ್ಷಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು.
3 ವರ್ಷದಿಂದ ಈಚೆಗೆ 13 ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚಿದ್ದೀರಿ. 37 ಸಂಸ್ಥೆಗಳು ರೂ.6,103 ಕೋಟಿ ನಷ್ಟದಲ್ಲಿ ನಡೆಯುತ್ತಿದ್ದು, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಬೇಸರಿಸಿದರು.