ಬೆಂಗಳೂರು: ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಹೆಚ್ಚಿನ ಒತ್ತಡ ಬೇಡ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದ್ದಾರೆ.
ಯಾರೇ ಬಂದರೂ ನಮ್ಮ ಸಂಘಟನೆ ಗಟ್ಟಿ ಇದ್ದರೆ ಗೆಲುವು ನಮ್ಮದೆ. ಮನೆ ಮನೆಗೂ ಪಕ್ಷದ ಕಾರ್ಯಕರ್ತರು ಹೋಗಬೇಕು. ಪ್ರತಿ ಮನೆಯ ಮೇಲೂ ಬಿಜೆಪಿ ಬಾವುಟ ನೆಟ್ಟಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳ ಸಭೆ ನಡೆಸಿ, ಸಮುದಾಯದ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿ, ಸಣ್ಣ ಸಮುದಾಯಗಳನ್ನೂ ಕಡೆಗಣಿಸುವುದು ಬೇಡ. ಹೋಬಳಿ ಮಟ್ಟದಲ್ಲಿ ಜಾತಿ ಸಮಾವೇಶಗಳನ್ನು ಮಾಡಿ ಎಂದು ಸೂಚಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ನ ಸ್ಥಳಿಯ ನಾಯಕರನ್ನು ಗುರುತಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಈಗಾಗಲೇ ಜಿಲ್ಲಾ ಕುರುಬರ ಸಂಘ ಸೇರಿದಂತೆ ಸ್ಥಳಿಯವಾಗಿ ಸಂಘಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವನೆ ಇದೆ. ಅದನ್ನು ಸೂಕ್ತ ರೀತಿಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯದಲ್ಲಿ ಬೀಡು ಬಿಟ್ಟಿದ್ದು, ರಾಜ್ಯ ನಾಯಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.