ಬೆಂಗಳೂರು: ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ್ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಬೆಳಿಗ್ಗೆ ಆರ್ ಎಂವಿ 2ನೇ ಸ್ಟೇಜ್ ಡಾಲರ್ಸ್ ಕಾಲೋನಿಯಲ್ಲಿರುವ ಶಿಕ್ಷಾ ಪ್ರೀ-ಸ್ಕೂಲ್ ಕೊಠಡಿ ಸಂಖ್ಯೆ 2ರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಸಹ ಕುಟುಂಬದೊಂದಿಗೆ ಮತಗಟ್ಟೆಗೆ ಹೋಗುವ ಮೊದಲು ದೇವರಿಗೆ ಪೂಜೆ ಸಲ್ಲಿಸಿ ಹೊರಟಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮತದಾನ ಎನ್ನುವುದು 18 ವರ್ಷ ತುಂಬಿದ ಪ್ರತಿಯೊಬ್ಬ ದೇಶದ ಪ್ರಜೆಯಾದವನ ಜವಾಬ್ದಾರಿ, “ನಮ್ಮದು ಸಕ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಮತ ಹಾಕುವುದೆಂದರೆ ನಾಡು ಕಟ್ಟುವ ಕೆಲಸದಲ್ಲಿ ಭಾಗಿಯಾದಂತೆ. ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿದೆ, ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕು ಚಲಾಯಿಸಿ ಶೇಕಡ 100ರಷ್ಟು ಮತದಾನ ಆಗುವಂತೆ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಸಚಿವರ ಪತ್ನಿ ಶ್ರುತಿ, ಮಗ ಅಮೋಘ ಮತ್ತು ಮಗಳು ಆಕಾಂಕ್ಷಾ ಕೂಡ ವೋಟು ಹಾಕಿದರು. ಅಮೋಘ ಮತ್ತು ಆಕಾಂಕ್ಷಾ ಇದೇ ಮೊದಲ ಸಲ ಮತ ಚಲಾಯಿಸಿದ ಸಂಭ್ರಮ ಅನುಭವಿಸಿದರು. ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕುಟುಂಬದವರೊಂದಿಗೆ ಮತದಾನ ಮಾಡಿದ ಫೋಟೋಗಳನ್ನು ಸಚಿವರು ಹಂಚಿಕೊಂಡಿದ್ದಾರೆ.