ತುಮಕೂರು: ಕೋವಿಡ್ ಸಂದರ್ಭದಲ್ಲಿ ಸುಧಾಕರ್ ಅವರ ಚಾಣಾಕ್ಷತನದ ಕರ್ತವ್ಯ ನಿರ್ವಹಣೆಯಿಂದಾಗಿ ಕೋವಿಡ್ ಹಿಮ್ಮೆಟ್ಟಿಸಲು ಸಾಧ್ಯವಾಯಿತು ಎಂದು ಸಚಿವ ಸುಧಾಕರ್‌ರನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೊಗಳಿದರು.
ಕೊರಟಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳಿಂದ ಇವತ್ತು ಅತ್ಯುತ್ತಮ ಮಟ್ಟದ ಸೌಲಭ್ಯ ಸಿಗುತ್ತಿದೆ.ಒಬ್ಬ ಸಚಿವರು ಇಡೀ ಕರ್ನಾಟಕದ ಜನ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಅಂದರೆ ಅದು ನಮ್ಮ ಡಾ.ಸುಧಾಕರ್ ಎಂದರು.
ಕೋವಿಡ್ ಸಂದರ್ಭದಲ್ಲಿ ಅವರಿಗೆ ಬಂದಂತಹ ಸವಾಲು ಬಹುಶ: ಸಿಎಂಗೂ ಬಂದಿಲ್ಲ. ಪಕ್ಷಾತೀತವಾಗಿ ಅವರ ಕೆಲಸಕ್ಕೆ ಮೆಚ್ಚುಗೆ ಹೇಳಲೇಬೇಕಿದೆ. ನಾವು ಸೂಕ್ಷ್ಮ ದೃಷ್ಠಿಯಿಂದ ಸರ್ಕಾರ ಹಾಗೂ ಸಚಿವರನ್ನು, ಮುಖ್ಯಮಂತ್ರಿಯನ್ನು ಗಮನಿಸುತ್ತಿದ್ದೇವೆ.
ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ. ಅವರನ್ನು ಹೊಗಳುವಂತಹ ಪ್ರಶ್ನೆಯಲ್ಲ, ಸುಧಾಕರ್ ಅವರು ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಜನ ಸಾಯುತ್ತಿದ್ದರು ಎನ್ನುವುದನ್ನು ಮರಿಯಬಾರದು ಎಂದರು. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಬಂದಿದ್ದಾರೆ. ಅದು ಅವರ ದೊಡ್ಡ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.