ತುಮಕೂರು: ಹೈಕಮಾಂಡ್ ನನಗೆ ಸಿಎಂ ಸ್ಥಾನ ಕೊಟ್ಟರೆ ನಾನು ಬೇಡ ಅಂತಾ ಹೇಳಲ್ಲ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸಿಎಂ ಆಗಬೇಕಂತ ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ ಇದೆ, ಆದ್ರೆ ಅದು ಸಾಧ್ಯ ಆಗುವುದಿಲ್ಲ ಎಂದರು. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು, ಸಿಎಲ್‌ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಯಾರು ಒಳ್ಳೆಯ ಆಡಳಿತ ಕೊಡುತ್ತಾರೋ ಅಂತಹವರನ್ನು ಹೈಕಮಾಂಡ್ ಸಿಎಂ ಮಾಡಬಹುದು ,ನಾವು 130 ಸ್ಥಾನ ಪಡೆಯುತ್ತೇವೆ. ಅಲ್ಲದೇ ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ , ಇವಿಎಮ್ ಮೇಲೆ ಮೊದಲಿಂದಲೂ ಆಕ್ಷೇಪ ಇದೆ. ಅದನ್ನು ಬ್ಯಾನ್ ಮಾಡಿ ಅಂತಾಲೂ ಹೇಳಿದ್ದೆವು. ಫಲಿತಾಂಶ ಬಂದ ಮೇಲೆ ಏನಾಗುತ್ತೋ ನೋಡೊಣ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ವರುಣಾದಲ್ಲಿ ಯಾವುದೇ ತೊಂದರೆ ಇಲ್ಲದೇ ಗೆಲ್ಲುತ್ತಾರೆ. ನಾನು ಕೂಡ ಕೊರಟಗೆರೆಯಲ್ಲಿ ಹಿಂದಿನ ಸಾರಿಗಿಂತ ಹೆಚ್ಚಿನ ಬಹುಮತದಲ್ಲಿ ಗೆಲ್ಲುತ್ತೇನೆ. ನಾನು 130 ಸ್ಥಾನ ಎಂದು ಈ ಬಾರಿ ಹೇಳಿದ್ದೇನೆ. ನನ್ನ ಲೆಕ್ಕಾಚಾರ ಸರಿ ಆಗಬಹುದು ಎಂದು ವಿಶ್ವಾಸವ್ಯಕ್ತಪಡಿಸಿದರು.