ಮಂಡ್ಯ: ನಮ್ಮ ಜಿಲ್ಲೆಯ ಸ್ವಾಭಿಮಾನ ಅಡವಿಡಲು ಹೋಗಬೇಡಿ, ನಿಮಗೆ ಸ್ವಾಭಿಮಾನ ಅಂತೇಳಲು ಯಾವುದೇ ಹಕ್ಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಇವತ್ತು ಯಾಕೆ ಸ್ವಾಭಿಮಾನಿ ಅಂತಾ ಪದೇ ಪದೇ ಬಳಸುತ್ತಾರೆ. ಸ್ವಾಭಿಮಾನಕ್ಕೂ ಅವರಿಗೂ ಎಲ್ಲಿಂದೆಲ್ಲಿ ಸಂಬಂಧ ? ಯಾವ ಸ್ವಾಭಿಮಾನಿ ಕೆಲಸ ಮಾಡಿದ್ದಾರೆ. ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾದಿದ್ದು ಒಂದೇ ಜಿಲ್ಲೆಗೆ ಭಾಗ್ಯ ಎಂದು ಕಿಡಿಕಾರಿದರು. ಸುಮಲತಾರವರೇ ಇನ್ಮುಂದೆ ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ, ನೀವು ಕೊಲೆಗಡುಕರಾಗಿದ್ದೀರಿ, ಕತ್ತು ಹಿಸುಕುದ್ದೀರಿ. ತಾವೂ ಬೆನ್ನಿಗೆ ಚೂರಿ ಹಾಕುವವರು ಎಂದು ಆಕ್ರೋಶಿಸಿದ್ದಾರೆ.
ಇವತ್ತು ನರೇಂದ್ರ ಮೋದಿಯವರ ಅದ್ಭುತ ಕಾರ್ಯದಿಂದ ಅವರನ್ನ ಸಂಪೂರ್ಣ ಬೆಂಬಲಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಅವತ್ತು ಸುಮಲತಾರನ್ನು ಗೆಲ್ಲಿಸಲು ಹೋರಾಟ ಮಾಡಿದವರ ಕಥೆ ಏನು? ನಾನು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಬಿ.ಚಂದ್ರಶೇಖರ್ ಎಲ್ಲರೂ ಅವರ ಜೊತೆ ನಿಂತಿದ್ದೆವು. ಇವತ್ತು ಅವರು ಯಾರಿಗೆ ನ್ಯಾಯ ಕೊಡುತ್ತಿದ್ದಾರೆ? ಈ ಬಗ್ಗೆ ಈಗಲೇ ಉತ್ತರ ಕೊಡಿ. ಅಷ್ಟೇ ಅಲ್ಲದೇ ಅವರ ಬಾಯಲ್ಲಿ ಇಂದಿನಿಂದ ಸ್ವಾಭಿಮಾನ ಅನ್ನೋ ಪದ ಬರಬಾರದು ಎಂದು ಗುಡುಗಿದರು.