ಮಧ್ಯಪ್ರದೇಶ: ಮದ್ಯ ಸೇವನೆ ಬಿಡಿ ಅದರ ಬದಲಿಗೆ ಹಸುವಿನ ಹಾಲನ್ನು ಕುಡಿಯಲು ಪ್ರಾರಂಭಿಸಿ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಜನರಿಗೆ ಕರೆ ನೀಡಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ, ಬಿಜೆಪಿ ನಾಯಕಿ ಘಟನೆ ಹಂಚಿಕೊಂಡಿದ್ದು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ಬಗ್ಗೆ ವಿವರಿಸಿದ್ದಾರೆ. ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕಳೆದೆರಡು ತಿಂಗಳಿನಿಂದ ಸಂಪೂರ್ಣ ಮದ್ಯಪಾನ ನಿಷೇಧ ಹಾಗೂ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಮಧ್ಯಪ್ರದೇಶದ ಓರ್ಚಾಗೆ ಭೇಟಿ ನೀಡಿ ಸ್ಥಳೀಯ ಮದ್ಯದ ಅಂಗಡಿಯೊಂದರ ಸುತ್ತಲೂ ಮೇಯುತ್ತಿದ್ದ ಬೀದಿ ಹಸುಗಳನ್ನು ಕಟ್ಟಿ ಅವುಗಳಿಗೆ ಆಹಾರ ನೀಡಿದ್ದಾರೆ. ಆ ಮದ್ಯದಂಗಡಿ ಮುಂದೆ ನಿಂತ ಉಮಾ ಭಾರತಿ,”ಶರಾಬ್ ನಹಿ, ದೂಧ್ ಪಿಯೋ’ ಎಂದಿದ್ದಾರೆ.
ಮದ್ಯದ ನೀತಿಗೆ ಕಾಯದೆ, ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಯನ್ನಾಗಿ ಪರಿವರ್ತಿಸಲು ನಾನು ಪ್ರಾರಂಭಿಸುತ್ತೇನೆ. ಓರ್ಚಾದಲ್ಲಿರುವ ಮದ್ಯದ ಅಂಗಡಿಯ ಹೊರಗೆ 11 ಹಸು ಕಟ್ಟಿ ಹಾಕಲು ಜನರಿಗೆ ತಿಳಿಸಿದ್ದೇನೆ. ಈ ಹಸುಗಳಿಗೆ ಆಹಾರ , ನೀರನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದಾರೆ.