Wednesday, November 29, 2023
spot_img
- Advertisement -spot_img

Hampi Utsav 2023 : ಕವಿದ ಬರ ಕಾರ್ಮೋಡ : ವಿಶ್ವವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ

ವಿಜಯನಗರ : ರಾಜ್ಯದಲ್ಲಿ ಆವರಿಸಿರುವ ಭೀಕರ ಬರ ಪರಿಸ್ಥಿತಿ ಹಿನ್ನೆಲೆ ಜಿಲ್ಲೆಯ ಐತಿಹಾಸಿಕ ಹಂಪಿ ಉತ್ಸವದ ಮೇಲೆ ಕಾರ್ಮೋಡ ಕವಿದಿದ್ದು, ಗತ ವೈಭವ ಸಾರುವ ಉತ್ಸವವನ್ನು ಫೆಬ್ರವರಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರತಿವರ್ಷ ನವೆಂಬರ್ 3, 4 ಹಾಗೂ 5 ರಂದು ನಡೆಯುತ್ತಿದ್ದ, ಹಂಪಿ ಉತ್ಸವವು ಈ ಬಾರಿ ನಿಗದಿತ ಅವಧಿಯಲ್ಲಿ ನಡೆಯಲು ಬರ ಅಡ್ಡಿಯಾಗುತ್ತಿದೆ. ವಿಜಯನಗರ – ಬಳ್ಳಾರಿ ಸೇರಿ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಹಂಪಿ ಉತ್ಸವ ನಡೆಸುವುದು ಕಷ್ಟ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯವು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾಗಿದೆ.

ಐತಿಹಾಸಿಕ ಹಂಪಿಯ ಕಲ್ಲಿನ ರಥವನ್ನು ವೀಕ್ಷಿಸುತ್ತಿರುವ ಪ್ರವಾಸಿಗರು.

ಇದನ್ನೂ ಓದಿ : ಕಾವೇರಿ ನೀರಿನ ವಿಚಾರದಲ್ಲಿ ಡಿಕೆಶಿ ರಾಜಕೀಯ ಮಾಡ್ತಿದ್ದಾರೆ : ಅಣ್ಣಾಮಲೈ

ಇದಕ್ಕೂ ಮೊದಲು ನವೆಂಬರ್‌ ತಿಂಗಳಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದ ಫೆಬ್ರವರಿಯಲ್ಲಿ ಉತ್ಸವ ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಅದರಂತೆ ಫೆಬ್ರವರಿಯಲ್ಲಿ ಉತ್ಸವ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ನಡೆದಿದ್ದ ಸಭೆಯಲ್ಲಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ಹಂಪಿ ಉತ್ಸವದ ಸಮಯದಲ್ಲಿನ ಸಾಂದರ್ಭಿಕ ಸಂಭ್ರಮ.

ಕರುನಾಡಿನ ಕಂಪನ್ನು ವಿಶ್ವಕ್ಕೆ ಪಸರಿಸುವ ಉತ್ಸವ..

ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ವಿಶ್ವ ಪಾರಂಪರಿಕ ತಾಣ ಹಂಪಿ ಜಗತ್ತಿನ ಎಲ್ಲರಿಗೂ ಅಚ್ಚುಮೆಚ್ಚು. ಈ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಸಹಸ್ರಾರು ಜನರು ಧಾವಿಸುತ್ತಾರೆ. ಬರೋಬ್ಬರಿ 6 ವರ್ಷಗಳ ಬಳಿಕ ಈ ಬಾರಿ ನವೆಂಬರ್‌ನಲ್ಲಿ ವಿಶ್ವವಿಖ್ಯಾತ ‘ಹಂಪಿ ಉತ್ಸವ’ ಅದ್ಧೂರಿಯಾಗಿ ನಡೆಯುವ ಆಶಾಭಾವನೆ ನಾಡಿನ ಕಲಾವಿದರಲ್ಲಿ ಮೂಡಿತ್ತು. ಸದ್ಯ ಮುಂದೂಡಿರುವುದು ಕೆಲವರಿಗೆ ಬೇಜಾರಿನ ಸಂಗತಿಯಾಗಿದೆ.

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಕಾರ್ಯಕ್ರಮದ ಮುಖ್ಯ ವೇದಿಕೆ.

ನನಸಾಗದ ಹಂಪಿ ಉತ್ಸವದ ರೂವಾರಿ ಎಂ.ಪಿ.ಪ್ರಕಾಶ್ ಕನಸು..

ಹಂಪಿ ಉತ್ಸವವನ್ನು ನಿಗದಿತ ದಿನಾಂಕಗಳಲ್ಲೆ ನಡೆಯಬೇಕೆಂದು ಹಂಪಿ ಉತ್ಸವದ ರೂವಾರಿಯೂ ಆಗಿರುವ ಆಗಿನ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು, ನವೆಂಬರ್ ತಿಂಗಳ3, 4, 5ರಂದು ಉತ್ಸವ ನಡೆಸಬೇಕೆಂದು ನಿಗದಿತ ದಿನಾಂಕ ಗೊತ್ತುಪಡಿಸಿದ್ದರು.

ಆದರೆ, ಸಮಯ ಕಳೆದಂತೆ ಸರಕಾರಗಳು ಬದಲಾದಂತೆ ಉತ್ಸವದ ದಿನಾಂಕಗಳು ಕೂಡ ಬದಲಾಗುತ್ತಿವೆ. ಹೀಗಾಗಿ ಹಂಪಿ ಉತ್ಸವ ಬರೀ ಒತ್ತಾಯದ ಉತ್ಸವವಾಗಿ ಬದಲಾಗುತ್ತಿದೆ ಎನ್ನುವುದು ಸ್ಥಳೀಯ ಕಲಾವಿದರ ಅಸಮಾಧಾನವಾಗಿದೆ.

ವಿಶ್ವದಲ್ಲೆ ಖ್ಯಾತಿಯಾಗಿರುವ ಕನ್ನಡಿಗರ ಸಂಭ್ರಮದ ಹಬ್ಬ ಹಂಪಿ ಉತ್ಸವಕ್ಕೆ ಶಾಶ್ವತವಾಗಿ ದಿನಾಂಕ ನಿಗದಿಯಾದಾಗು ಬಗ್ಗೆ ಹಲವು ವರ್ಷಗಳಿಂದ ಕೂಗು ಕೇಳಿಬರುತ್ತಲೇ ಇದೆ. ಆದರೆ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಇನ್ನಾದರೂ ಈ ಕುರಿತು ಸರ್ಕಾರ ಗಮನ ಹರಿಸಬೇಕೆಂದು ಜನರ ಒತ್ತಾಯುವಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles