ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ದಂಪತಿಗೆ ಕನ್ನಡಿಗರ ಕನ್ನಡ ಒಕ್ಕೂಟ ದುಬೈ ಯುಎಇ ವತಿಯಿಂದ ‘ಹುಟ್ಟೂರ ಸನ್ಮಾನ’ ನಡೆಯಿತು.
ನಗರದ ಚಾಮರಾಜಪೇಟೆಯ ಕರ್ನಾಟಕ ಕಲಾವಿದರ ಸಂಘದ ಅಂಬರೀಷ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಹಸಿರು ಮಿಶ್ರಿತ ಬಣ್ಣದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ದೇವೇಗೌಡರನ್ನು ಸನ್ಮಾನಿಸಿದರು. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಬಾಗಿನ ನೀಡಿ, ಪತಿ-ಪತ್ನಿಯ ಭಾವಚಿತ್ರ, ಸ್ವರಣಿಕೆ ನೀಡಿ ಗೌರವಿಸಿದರು.
ಇದಕ್ಕೂ ಮುನ್ನ ಗಿಡಕ್ಕೆ ನೀರು ಹಾಕುವ ಮೂಲಕ ಸನ್ಮಾನ ಕಾರ್ಯಕ್ರಮಕ್ಕೆ ದೇವೇಗೌಡರು ಚಾಲನೆ ನೀಡಿದರು. ದುಬೈ ಕನ್ನಡ ಒಕ್ಕೂಟದ ಪ್ರಮುಖರು ಮತ್ತು ರಾಜಕೀಯ ಮುಖಂಡರು ಸಾಥ್ ನೀಡಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವೇಗೌಡರು, ದುಬೈ ಕನ್ನಡಿಗರು ನನ್ನ ಹಾಗೂ ಪತ್ನಿಯನ್ನು ಕೂರಿಸಿ ಗೌರವ ಸಲ್ಲಿಸಿದ್ದಾರೆ. ನೀವು ಕೊಟ್ಟಿರುವ ಗೌರವಕ್ಕೆ ನಾನು ತಲೆಬಾಗಿ ನಮಸ್ಕಾರ ಮಾಡುತ್ತೇನೆ. ನನಗೇನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನನಗೆ ಮಾತು ಹೊರಡುತ್ತಿಲ್ಲ ಎಂದು ಭಾವುಕರಾದರು.
ಆದಿಚುಂಚನಗಿರಿಯ ಪೀಠಾಧಿಪತಿ ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ದೇವೇಗೌಡರ ಮಾತುಗಳನ್ನು ಕೇಳಿದ ಮೇಲೆ ಮತ್ತೇನು ಮಾತಿಲ್ಲ ಅಂದುಕೊಂಡಿದ್ದೇನೆ. ದೇವೇಗೌಡರು ಬದುಕಿನಲ್ಲಿ ಆದರ್ಶಗಳನ್ನ ರೂಢಿಸಿಕೊಳ್ಳಲು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಅದರ ಫಲ ನಾನು ನೋಡಿದ್ದೇನೆ. ಆದರೆ, ಅದರ ತಪಸ್ಸಿನ ಫಲ ಸಂಪೂರ್ಣವಾಗಿ ಸಿಕ್ಕಿಲ್ಲ, ಅದು ನಿಮಗೂ ಗೊತ್ತಿದೆ. ದೇವೇಗೌಡರ ನೇಗಿಲಯೋಗಿ ಪುಸ್ತಕ ಒಂದು ಗ್ರಂಥ ಎಂದು ಹೇಳಲು ಬಯಸುತ್ತೇನೆ. ದೇವೇಗೌಡರು 11 ತಿಂಗಳಲ್ಲಿಮಾಡಿದ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದರು.
ವಿಷ್ಣುವರ್ಧನ್ ಪ್ರಾಂತ್ಯ ಆಳಿದ್ರೆ, ನಮ್ಮ ಗೌಡ್ರು ಸಾಮ್ರಾಜ್ಯ ಆಳಿದರು: ಸಾಮ್ರಾಜ್ಯ ಆಳಿದವರು ಚಕ್ರವರ್ತಿ ಆಗ್ತಾರೆ. ಗೌಡರು ಚಿಕ್ಕವರಿರುವಾಗ ಒಂದು ಸಲ ಅಮ್ಮನ ತೊಡೆಯ ಮೇಲೆ ಮಲಗಿದ್ದರು. ಆಗ ಬುಡಬುಡಕಿಯವರು ಬಂದು ನೋಡಿ, ಗೌಡರು ಚಕ್ರವರ್ತಿ ಆಗ್ತಾರೆ ಅಂತ ಆವತ್ತೇ ಹೇಳಿದ್ರಂತೆ. ಗೌಡರು ಮನಸ್ಸು ಮಾಡಿದ್ದರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದಿತ್ತು. ನೈಸ್ ಗೆ ದೇವೇಗೌಡರು ಒಪ್ಪಿಗೆ ಕೊಡ್ಲಿಲ್ಲ. ಆಗ ಎಷ್ಟು ದುಡ್ಡು ಬೇಕಾದರೂ ಸಿಗುತ್ತಿತ್ತು ಅಂತ ಅವರಿಗೆ ಗೊತ್ತಿತ್ತು. ಆದರೆ, ದೇವೇಗೌಡರು ಹಾಗೆ ಮಾಡಿಲ್ಲ. ಇಂತಹ ವ್ಯಕ್ತಿತ್ವವನ್ನು ಗುರುತಿಸಬೇಕು. ಇದನ್ನು ದುಬೈ ಕನ್ನಡಿಗರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯ್ಪುರ, ಜೆಡಿಎಸ್ ಮುಖಂಡ ಜಫ್ರುಲಾ ಖಾನ್, ಕನ್ನಡಿಗರ ಕನ್ನಡ ಒಕ್ಕೂಟ ದುಬೈ ಅಧ್ಯಕ್ಷ ಸಾದನ್ ದಾಸ್, ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಖಲೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.