ಕೋಲಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ನಡೆದಿದೆ. ಈ ವೇಳೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟು ದಿಕ್ಕಾಪಾಲಾಗಿ ಓಡಿದ್ದಾರೆ.
ಬಿಜೆಪಿ ರೈತ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಂಸದ ಮುನಿಸ್ವಾಮಿ ಸೇರಿದಂತೆ ಹಿರಿಯ ನಾಯಕರು ಭಾಗಿಯಾಗಿದ್ದರು. ಈ ವೇಳೆ ಭಾರೀ ಸಂಖ್ಯೆಯ ಜನ ಧಿಕ್ಕಾರ ಕೂಗಿದ ಸದ್ದಿಗೆ, ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೇ ಇದ್ದ ಜೇನುಗೂಡಿನಿಂದ ಜೇನುಹುಳುಗಳು ದಾಳಿ ಮಾಡಿವೆ.
ಕ್ರಮೇಣ ಅಲ್ಲಿದ್ದವರ ಮೇಲೆಲ್ಲ ಜೇನು ದಾಳಿ ಮಾಡಲಾರಂಭಿಸಿದ ಬೆನ್ನಲ್ಲೇ ಬಿಜೆಪಿಗರು ಪ್ರತಿಭಟನೆ ನಿಲ್ಲಿಸಿ, ದಿಕ್ಕು ಕಾಣದೆ ಕಾಲ್ಕಿತ್ತಿದ್ದಾರೆ. ಇನ್ನು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಸಾರ್ವಜನಿಕರ ಮೇಲೂ ದಾಳಿ ನಡೆಸಿವೆ.
ಸಂಸದ ಮುನಿಸ್ವಾಮಿ ಅವರೂ ಜೇನುನೊಣಗಳನ್ನು ಕಂಡು ಗಾಬರಿಯಿಂದ ಓಡಲು ಯತ್ನಿಸಿದರು. ಆದರೂ ಅವರ ಮೇಲೂ ಜೇನು ದಾಳಿ ನಡೆಸಿತು. ಒಟ್ಟಾರೆ ಈ ಘಟನೆಯಲ್ಲಿ ಪೊಲೀಸರು, ಪತ್ರಕರ್ತರನ್ನೂ ಜೇನುಹುಳು ಬಿಟ್ಟಿಲ್ಲ.
ಇದನ್ನೂ ಓದಿ: ಬಿಜೆಪಿ ಸೇರಿದ್ದ 17 ಶಾಸಕರಿಗೆ ಕಾಂಗ್ರೆಸ್ ಟಾರ್ಚರ್ ಕೊಡ್ತಿದೆ: ಮುನಿಸ್ವಾಮಿ
ಕೆಲವರು ತಮ್ಮ ವಾಹನಗಳೊಂದಿಗೆ ಅಲ್ಲಿಂದ ಪರಾರಿಯಾದರೂ ಅವರನ್ನು ಜೇನುಹುಳುಗಳು ಹಿಂಬಾಲಿಸಿವೆ. ಕೊನೆಗೆ ಬಟ್ಟೆ, ಬ್ಯಾನರ್, ಕವರ್ ಅನ್ನು ಮರೆಮಾಚಿಕೊಂಡು ತಮ್ಮ ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆರ್.ಎಲ್.ಜಾಲಪ್ಪ ಆಸ್ಪತ್ರೆ, ಕೆಲವರನ್ನು ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸಂಸದ ಮುನಿಸ್ವಾಮಿ ಕೂಡ ಚಿಕಿತ್ಸೆ ಪಡೆದರು.
ಪ್ರತಿಭಟನೆ ಹಾಳು ಮಾಡಲು ಕಾಂಗ್ರೆಸ್‌ನ ಕೆಲವರು ಜೇನುಗೂಡಿಗೆ ಕಲ್ಲು ಎಸೆದಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.