Thursday, September 28, 2023
spot_img
- Advertisement -spot_img

ಚರ್ಚ್‌ಸ್ಟ್ರೀಟ್‌ನಲ್ಲಿ ಸುತ್ತಾಡಿದ ನೆದರ್‌ಲ್ಯಾಂಡ್ಸ್‌ ಪ್ರಧಾನಿ

ಬೆಂಗಳೂರು: ಕರ್ನಾಟಕಕ್ಕೆ ಭೇಟಿ ನೀಡಿರುವ ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಇಂದು ಬೆಂಗಳೂರಿನ ಹಾಟ್‌ಸ್ಪಾಟ್‌ ಎಂದೇ ಕರೆಯಲ್ಪಡುವ ಚರ್ಚ್‌ಸ್ಟ್ರೀಟ್‌ನಲ್ಲಿ ಸುತ್ತಾಡಿದರು. ಬಳಿಕ ಅಲ್ಲಿನ ಮಳಿಗೆಯಲ್ಲಿ ಚಹಾ ಕುಡಿದರು.

ಮಾರ್ಕ್ ರುಟ್ಟೆ ಅವರು ಭಾರತ ಹಾಗೂ ನೆದರ್‌ಲ್ಯಾಂಡ್ಸ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸವಿನೆನಪಿಗಾಗಿ ಬೆಂಗಳೂರಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಇಂದು ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟ್‌ಗೆ ಬಂದ ರುಟ್ಟೆ, ಯುಪಿಐ ಮೂಲಕ ಹಣ ಪಾವತಿ ಮಾಡಿ ಚಹಾ ಕುಡಿದರು.

ಬಳಿಕ ಮಾತನಾಡಿದ ಅವರು, ಭಾರತದ ಡಿಜಿಟಲ್ ಪಾವತಿಯ ಯುಪಿಐ ವಿಧಾನವು ಸರಳ ಹಾಗೂ ಸುಲಭವಾಗಿದೆ.ಇಲ್ಲಿನ ಚರ್ಚ್‌ಸ್ಟ್ರೀಟ್‌ನಲ್ಲಿ ಚಹಾ ಸವಿದಿರುವುದು ಸಂತಸ ತಂದಿದೆ. ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ಹಂತ ಹಂತವಾಗಿ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿ20ಯ ಘೋಷಣೆಗೆ ತಮ್ಮ ಸಂಪೂರ್ಣ ಸಹಮತವಿದೆ ಎಂದರು.

ಸಾರ್ವಜನಿಕರೊಂದಿಗೆ ಬೆರೆತ ಅವರು ಮುಕ್ತವಾಗಿ ಜನರ ಬಳಿ ತೆರಳಿ ಕೈ ಕುಲುಕಿದರು. ಚಿಕ್ಕ ಮಗುವೊಂದನ್ನು ಕಂಡು ಖುಷಿಯಾದರು, ಬಳಿಕ ಅಲ್ಲಿದ್ದವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಶಾಸಕ ಎನ್.ಎ.ಹ್ಯಾರಿಸ್ ಜೊತೆಗಿದ್ದರು.

ಡಚ್‌ ಸರ್ಕಾರಕ್ಕೆ ಸದಾ ಸಹಕಾರ: ಡಿಕೆಶಿ

ಇದಕ್ಕೂ ಮುನ್ನ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಅತ್ಯುತ್ತಮ ಕೈಗಾರಿಕಾ ನೀತಿ, ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆಗೆ ತಿಳಿಸಿದರು.

ಇದನ್ನೂ ಓದಿ: ಲೋಕಸಭೆ ಎಲೆಕ್ಷನ್‌ ಬಳಿಕ ಮೋದಿ ನಿರ್ಗಮನ ಖಚಿತ : ಲಾಲು

ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್‌ಲ್ಯಾಂಡ್ಸ್ ಕಂಪನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ. ವಿಶೇಷವಾಗಿ ಡಚ್ ಕಂಪನಿಗಳಿಗೆ ಉತ್ತಮ ಪ್ರೋತ್ಸಾಹ ನೀಡಲು ಅನೇಕ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕೈಗಾರಿಕೆಗಳು ಬೆಂಗಳೂರಿನ ಹೊರತಾಗಿ ಬೇರೆ ನಗರಗಳಲ್ಲಿ ಆರಂಭಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇದರ ಪ್ರಯೋಜನವನ್ನು ಬಳಸಿಕೊಳ್ಳಿ ಎಂದು ಪ್ರಧಾನಿಗೆ ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles