ಹಾಸನ: ಡಿವೈಎಸ್ ಪಿ ಉದಯ್ ಭಾಸ್ಕರ್ ಅವರು ವರ್ಗಾವಣೆ ಮಾಡುವಂತೆ ತಾವೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜಾತ್ಯಾತೀತ ಜನತಾದಳದ ನಾಯಕ ಹೆಚ್ ಡಿ ರೇವಣ್ಣ ಅವರ ಆರೋಪಗಳಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪತ್ರ ಬರೆದಿದ್ದಾರೆ.
ಡಿವೈಎಸ್‌ಪಿ ಉದಯ್ ಭಾಸ್ಕರ್ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಕ್ರಮಕ್ಕೆ ಹೆಚ್‌ಡಿ ರೇವಣ್ಣ ಒತ್ತಾಯಿಸಿದ್ದರು. ಇದೀಗ ಡಿವೈಎಸ್‌ಪಿ ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಸ್ವಯಂ ವರ್ಗಾವಣೆಗೆ ಕೋರಿದ್ದಾರೆ.


ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರುತ್ತೇನೆ ಎಂದು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ.
ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನನಗೆ ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ. ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.