ಬೆಂಗಳೂರು: ಪ್ರತಿದಿನ ಆಫೀಸ್ ಹೋಗಲು ಕಷ್ಟ ಆಗ್ತಿದೆ, ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆ ಹಸುಗಳು ವಾಹನಗಳಿಗೆ ಅಡ್ಡ ಬರುತ್ತಿವೆ. ಇದರಿಂದ ಆಫೀಸ್‍ಗೆ ಹೋಗಲು ನಿತ್ಯ 40 ರಿಂದ 50 ನಿಮಿಷ ಲೇಟಾಗ್ತಿದೆ. ಹೀಗಾಗಿ ಅರವಿಂದ ಲಿಂಬಾವಳಿಯವರೇ ದಯವಿಟ್ಟು ಸಮಸ್ಯೆ ಪರಿಹರಿಸಿ ಎಂದು ಟೆಕ್ಕಿಗಳು ದೂರು ನೀಡಿದ್ದಾರೆ.
ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಎಮ್ಮೆ, ಹಸುಗಳಿಂದ ಟ್ರಾಫಿಕ್ ಆದಾಗ ಅಲ್ಲಿರುವ ಟ್ರಾಫಿಕ್ ಪೊಲೀಸರೇ ಅವುಗಳನ್ನ ಓಡಿಸ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೆಕ್ಕಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ ಆಫೀಸ್‍ಗೆ ಹೋಗೋ ಹೊತ್ತಲ್ಲೇ, ಮಾರ್ಚ್ ಫಾಸ್ಟ್ ಮಾಡೋ ರೀತಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆ, ಹಸುಗಳು ಹೋಗ್ತಿರುತ್ತೆ. ಕಚೇರಿಗೆ ಹೋಗಬೇಕು ಅಂತ ಕಾರು, ಬೈಕ್ ಹತ್ತಿದ್ರೆ, ರಸ್ತೆಯಲ್ಲಿ ಅವುಗಳನ್ನ ಓಡಿಸೋದೆ ನಿತ್ಯ ಕಾಯಕವಾಗ್ತಿದೆ.
ಸರ್ಜಾಪುರ ರಸ್ತೆಯಲ್ಲಿ ಹಲವು ಐಟಿ ಕಂಪನಿಗಳಿದ್ದು, ವಿಪ್ರೋ, ರೇನೋ ಬೋ ಮೂಲಕ ಸರ್ಜಾಪುರ ಮುಖ್ಯ ರಸ್ತೆಯ 2 ಕಿಲೋ ಮೀಟರ್ ವರೆಗೂ ಗುಂಪು ಗುಂಪಾಗಿ ಎಮ್ಮೆ, ಹಸುಗಳು ರಸ್ತೆಗಿಳಿಯುತ್ತಿವೆ. ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಕಮಿಷನರ್ , ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಗೆ ಟ್ಯಾಗ್ ಮಾಡಿ ಎಂಎನ್‍ಸಿ ಟೆಕ್ಕಿಗಳು ಸಾಲು ಸಾಲು ದೂರು ನೀಡಿದ್ದಾರೆ.