ಶಿವಮೊಗ್ಗ : ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುತ್ತಾರೆ ಅವರೆಲ್ಲ ಬರಲಿ, ಈಗಾಗಲೇ ಜಿಲ್ಲೆಯಲ್ಲಿ ಆಯನೂರು ಮಂಜುನಾಥ್ ಹಾಗೂ ನಾಗರಾಜ ಗೌಡ ಸೇರಿದ್ದಾರೆ. ಇನ್ನಷ್ಟು ಜನರು ಮುಂದಿನ ದಿನಗಳಲ್ಲಿ ಬರಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಬರುವವರ ಬಗ್ಗೆ ಮುಖಂಡರು ತೀರ್ಮಾನಿಸುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಇತರರನ್ನು ಸೇರಿಸಿಕೊಳ್ಳುವುದು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ. ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದದ್ದು ತಮ್ಮ ಪ್ರಚಾರಕ್ಕೆ. ಇಸ್ರೋ ಸಾಧನೆಯನ್ನು ನಾವು ಮೆಚ್ಚಲೇಬೇಕು, ನಮ್ಮ ಸಮಾಜದವರು ಆ ಸಾಧನೆಯಲ್ಲಿ ಇದ್ದದ್ದು ಬಹಳ ಖುಷಿಯಾಗುತ್ತದೆ. ಈಗಾಗಲೇ ಸಿಎಂ ಕೂಡ ಹೋಗಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ‘ಗ್ಯಾರಂಟಿ ಸರ್ಕಾರ’ಕ್ಕೆ 100 ದಿನ; ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ಮಣಿಪುರದಲ್ಲಿ ಅನೇಕ ಜನ ಸಾಯಬೇಕಾದರೆ ಅವರು ಹೋಗಿರಲಿಲ್ಲ. ಆದರೆ ರಾಕೆಟ್ ಬಿಟ್ಟ ತಕ್ಷಣ ಬರುತ್ತಾರೆ. ಅದು ತಪ್ಪು ಎಂದು ನಾನು ಹೇಳುವುದಿಲ್ಲ. ಅದೇ ತಂದೆಯ ಸ್ಥಾನದಲ್ಲಿ ಇದ್ದಂತಿರುವ ಪ್ರಧಾನಿಯವರು ಮಣಿಪುರಕ್ಕೆ ಹೋಗಿದ್ದರೆ ಗಲಭೆಯಾದರೂ ಕಡಿಮೆಯಾಗುತ್ತಿತ್ತು ಎಂದು ಹೇಳಿದರು.
ಮೋದಿ ಸ್ವಾಗತಕ್ಕೆ ಬಿಜೆಪಿ ಮುಖಂಡರು ಬ್ಯಾರಿಕೇಡ್ ನಲ್ಲಿ ನಿಂತಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಾದರೂ ನಿಲ್ಲುವಷ್ಟು ಪುಣ್ಯ ಅವರಿಗೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಎನ್ ಇ ಪಿ ಮೂಲಕ ಮಕ್ಕಳಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬಿಸುತ್ತಿದ್ದಾರೆ. ಪ್ರತಿಯೊಂದು ರಾಜ್ಯದ ಸಂಸ್ಕೃತಿ, ಸಂಪ್ರದಾಯ ಭಿನ್ನವಿರುತ್ತದೆ. ನಾವೆಲ್ಲ ಭಾರತೀಯರು, ನಮ್ಮ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಿಂದ ತೆರಿಗೆ ಪಾವತಿಯಾಗುತ್ತಿದ್ದರೂ ಕೇಂದ್ರ ಸರ್ಕಾರ ನಮಗೆ ಯಾಕೆ ಅನುದಾನ ಕೊಡುತ್ತಿಲ್ಲ? ಹಿಂದಿನ ಸರ್ಕಾರ ಡಬಲ್ ಎಂಜಿನ್ ಎಂದೇ ಇತ್ತು. ಆದರೆ ಅವರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿಲ್ಲ ಎಂದು ದೂರಿದರು.
ನಾನು ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಕೇಳುತ್ತಿದ್ದೇನೆ, ಈ ವಿಚಾರಕ್ಕೆ ಸದ್ಯದಲ್ಲೇ ಕೇಂದ್ರ ಶಿಕ್ಷಣ ಸಚಿವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ವಿಲೀನ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕುರಿತು ಪಾಲಕರಿಂದ ಒತ್ತಾಯವಿದೆ. ಕಡಿಮೆ ಸಂಖ್ಯೆ ಇರುವ ಶಾಲೆಗಳನ್ನೆಲ್ಲ ಒಟ್ಟುಗೂಡಿಸಲಾಗುವುದು. ಇಲಾಖೆಯಿಂದಲೇ ದೂರದ ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಮಂಡಳಿಯವರು ಸೇರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
50ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳ ಸಂಖ್ಯೆ ರಾಜ್ಯದಲ್ಲಿ ಸುಮಾರು 22000 ಇವೆ. ಮಲೆನಾಡಲ್ಲಿ ಇಂತಹ ಸಮಸ್ಯೆ ಬಹಳಷ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ, ಯುಕೆಜಿ ಶಿಕ್ಷಣ ಆರಂಭಿಸಿದ್ದೇವೆ ಇದನ್ನು ವಿಸ್ತರಿಸಲಾಗುವುದು ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.