ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಜಾರಿ ಮಾಡಿ ಸುಭದ್ರ ಆಡಳಿತ ಕೊಡುವುದೇ ನಮ್ಮ ಮೊದಲ ಆದ್ಯತೆ ಎಂದು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಾರ್ಯಾಧ್ಯಕ್ಷನಾಗಿ 5 ವರ್ಷದಿಂದ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಅಲ್ಲದೇ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗಿದೆ. ಹೀಗಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಸಹಜವಾಗಿ ಆ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಅಪೇಕ್ಷೆ ಇರುತ್ತದೆ. ಆ ದೃಷ್ಟಿಯಿಂದ ಮುಂದೆ ರಚಿಸುವ ಸಚಿವ ಸಂಪುಟದಲ್ಲೂ ಹೆಚ್ಚಿನ ಪ್ರಾತಿನಿಧ್ಯ ಮತ್ತು ಉನ್ನತ ಖಾತೆಗಳನ್ನು ಲಿಂಗಾಯತ ಸಮುದಾಯಕ್ಕೆ ವರಿಷ್ಠರು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಾಳೆಯಿಂದ ಕ್ಯಾಬಿನೆಟ್ ರಚನೆ ಆಗುತ್ತದೆ. ಕರ್ನಾಟಕ ರಾಜ್ಯದ ಜನತೆಗೆ ನಾವೇನು ಭರವಸೆಯನ್ನು ಕೊಟ್ಟಿದ್ದೆವೋ ಅವೆಲ್ಲವನ್ನೂ ಈಡೇರಿಸಿ ಉತ್ತಮವಾದ ಆಡಳಿತವನ್ನು ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.