Thursday, September 28, 2023
spot_img
- Advertisement -spot_img

‘ಚುನಾವಣೆ ಸೋಲು ತಾತ್ಕಾಲಿಕ; ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ’

ಬೆಂಗಳೂರು: ಚುನಾವಣೆಯ ಸೋಲು ತಾತ್ಕಾಲಿಕ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ಸೋಲಿನಿಂದ ಬೇಸರಗೊಂಡು, ನಿಖಿಲ್ ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಮಗನಿಗೆ ರಾಜಕೀಯ ಸಹವಾಸ ಬೇಡ ಎಂದು ಹೇಳಿದ್ದೇನೆ ಎಂದಿದ್ದರು. ಎಲ್ಲ ಗೊಂದಲಗಳಿಗೆ ಇದೀಗ ತಮ್ಮ ಹೇಳಿಕೆ ಮೂಲಕ ನಿಖಿಲ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಅರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ. ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ; ನಾಳೆ ʼಗೃಹಲಕ್ಷ್ಮಿʼಯರ ಕೈಸೇರಲಿದೆ ₹2,000

‘ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎನ್ನುವುದು ಒಂದು ಭಾಗವಾದರೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನ ಸ್ಥಾನ ಕೊಟ್ಟಿರುವ ಸಮಸ್ತ ಕಲಾಭಿಮಾನಿಗಳಿಗೆ ನಾನು ಎಂದೆಂದಿಗೂ ಚಿರಋಣಿ. ನನ್ನ ಮೊದಲ ಚಿತ್ರ ಜಾಗ್ವಾರ್ ಮತ್ತು ನಾನು ನಟಿಸಿರುವ ಎಲ್ಲ ಸಿನಿಮಾಗಳಲ್ಲೂ ಬೆನ್ನುತಟ್ಟಿ ಆಶೀರ್ವದಿಸಿ, ಪ್ರೋತ್ಸಾಹಿಸಿ ನನ್ನ ಯಶಸ್ಸಿಗೆ ನೀವೆಲ್ಲರೂ ಕಾರಣರಾಗಿದ್ದಿರಿ. ಅದಕ್ಕೆ ನಾನು ಆಭಾರಿ. ಇನ್ನೂ ಬೆಟ್ಟದಷ್ಟು ಕನಸು ಹೊತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ಮನರಂಜಿಸಬೇಕು ಎನ್ನುವುದು ನನ್ನ ಜೀವನದ ಗುರಿ’ ಎಂದಿದ್ದಾರೆ.

‘ಇಲ್ಲಿಯವರೆಗೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ನಾನು ನಿಮ್ಮ ನಿರೀಕ್ಷೆಗೂ ಮೀರಿ ಚಿತ್ರಗಳನ್ನು ಮಾಡುವವನಿದ್ದೇನೆ. ಕೊನೆಯದಾಗಿ ಎಲ್ಲ ಮಾಧ್ಯಮದ ಮಿತ್ರರಿಗೆ ರಾಜಕಾರಣ ಮತ್ತು ಸಿನಿಮಾದ ವಿಚಾರವಾಗಿ ನನಗೆ ಸಂಬಂಧಿಸಿದ ವಿಷಯಗಳಿದ್ದರೆ ಆ ಪ್ರಶ್ನೆಗಳಿಗೆ ನಾನೇ ಉತ್ತರ ನೀಡಲು ಬಯಸುತ್ತೇನೆ’ ಎಂದು ನಿಖಿಲ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles