ಬೀದರ್ : ಎರಡೂವರೆ ವರ್ಷದ ಬಳಿಕ ಇಂದು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಜಯಭೇರಿ ಬಾರಿಸುವ ಎಲ್ಲ ಸಾಧ್ಯತೆಗಳಿವೆ.
ಒಟ್ಟು 35 ಸದಸ್ಯ ಬಲ ಹೊಂದಿರುವ ಬೀದರ್ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು 18 ಸದಸ್ಯರ ಬೆಂಬಲ ಅಗತ್ಯವಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ, 35 ಚುನಾಯಿತ ಸದಸ್ಯರು, ಓರ್ವ ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 38 ಮತಗಳು ಚಲಾವಣೆಯಾಗಲಿವೆ.
ಕಾಂಗ್ರೆಸ್ ಗೆಲ್ಲುವ ಸಾಧ್ಯತೆ : ನಗರಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 7, ಜೆಡಿಎಸ್ 9, ಎಂಐಎಂ 2, ಎಎಪಿ 1 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಗೆ 16 ಚುನಾಯಿತ ಸದಸ್ಯರ ಮತದ ಜೊತೆಗೆ ಓರ್ವ ಶಾಸಕ ಹಾಗೂ ಓರ್ವ ಪರಿಷತ್ ಸದಸ್ಯನ ಮತ ಬೀಳಲಿದೆ. ಹೀಗಾಗಿ, ಕಾಂಗ್ರೆಸ್ ಸುಲಭವಾಗಿ ಮ್ಯಾಜಿಕ್ ನಂಬರ್ ಪಡೆಯುವ ಸಾಧ್ಯತೆ ಇದೆ. ಆದರೆ, ಸದಸ್ಯರು ಅಡ್ಡ ಮತದಾನ ಮಾಡುವ ಭೀತಿಯೂ ಕಾಂಗ್ರೆಸ್ ಗೆ ಇದೆ. ಅಧ್ಯಕ್ಷ ಸ್ಥಾನ 2ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್! ಅನರ್ಹತೆ ಆದೇಶಕ್ಕೆ ʼಸುಪ್ರೀಂʼ ತಡೆ
ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಸಮಯ ನೀಡಲಾಗಿದೆ. ಅಪರಾಹ್ನ 3 ರಿಂದ 5 ಗಂಟೆಯವರೆಗೆ ‘ಕೈ’ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ಫಲಿತಾಂಶ ಪ್ರಕಟವಾಗಲಿದೆ. ನಗರಸಭೆ ಕಟ್ಟಡದಲ್ಲಿ ಚುನಾವಣೆ ನಡೆಯಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.