ಬೆಂಗಳೂರು: ಸದ್ಯ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನವೂ ಖಾಲಿ ಇದ್ದು, ಡಿಸೆಂಬರ್ 4ರೊಳಗೆ ಈ ಕುರ್ಚಿಗೆ ನಾಯಕ ಹೆಸರು ಘೋಷಣೆ ಮಾಡುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ಈ ಸ್ಥಾನಕ್ಕೆ ಯಾರು ನೇಮಕವಾಗಲಿದ್ದಾರೆ ಎಂಬ ಗುಟ್ಟನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ, ಮೂಲಗಳ ಪ್ರಕಾರ ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲೇ ಪರಿಷತ್ ವಿಪಕ್ಷ ನಾಯಕನ ಸ್ಥಾನದ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲೇ ನಾಯಕನ ಘೋಷಣೆಯಾಗಲಿದೆ.
ಇದನ್ನೂ ಓದಿ : ಮಾಜಿ ಸಂಸದೆ, ನಟಿ ವಿಜಯಶಾಂತಿ ಕಾಂಗ್ರೆಸ್ ಸೇರ್ಪಡೆ!
ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ನಾಯಕರ ಆಯ್ಕೆಯ ಪ್ರಕ್ರಿಯೆ ಮುಗಿಯಲಿದ್ದು, ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ದ ಬಿಜೆಪಿಯ ನಾಯಕರು ತೊಡೆ ತಟ್ಟಲಿದ್ದಾರೆ.
ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿ ನಾಯಕ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್.ಅಶೋಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಬಂದು ಹಲವು ತಿಂಗಳಾಗಿದ್ದರೂ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಅಧಿವೇಶನವು ವಿಪಕ್ಷ ನಾಯಕನ ಅನುಪಸ್ಥಿತಿಯಲ್ಲೇ ಪೂರ್ಣಗೊಂಡಿತ್ತು.
ವಿಪಕ್ಷ ನಾಯಕನ ಸ್ಥಾನ ಖಾಲಿ ಇರುವ ವಿಚಾರವನ್ನೇ ಕಾಂಗ್ರೆಸ್ ದಾಳವಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿತ್ತು. ಚಳಿಗಾಲದ ಅಧಿವೇಶನ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ವಿಪಕ್ಷ ನಾಯಕನ ಸ್ಥಾನ ಕೊನೆಗೂ ಭರ್ತಿಯಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.