ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿದ್ದಾರೆ. ಮಾಹಿತಿ ತಿಳಿದ ಚುನಾವಣಾ ಅಧಿಕಾರಿಗಳು ರೇಣುಕಾಚಾರ್ಯ ಭಾಷಣದ ವೇಳೆ ದಾಳಿ ನಡೆಸಿ ಸಭೆ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ನೆರೆದಿದ್ದ ಜನರಿಗೆ ಊಟ ಮಾಡಲೂ ಅವಕಾಶ ನೀಡದೆ ತಂದಿದ್ದ ಕ್ಯಾಟರಿಂಗ್ ಊಟ ವಾಪಸ್ ಕಳುಹಿಸಿದ್ದಾರೆ. ಸದ್ಯ ರೇಣುಕಾಚಾರ್ಯ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆಯನ್ನೂ ಜಾರಿ ಮಾಡಲಾಗಿದೆ. ರೇಣುಕಾಚಾರ್ಯ ಅನುಮತಿ ಪಡೆಯದ ಹಿನ್ನೆಲೆ ದಾಳಿ ನಡೆಸಿ ಸಭೆ ರದ್ದುಗೊಳಿಸಿದ್ದಾರೆ.
ಇನ್ನೂ ಇದೇ ರೀತಿ ಸಚಿವೆ ಶಶಿಕಲಾ ಜೊಲ್ಲೆ ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದರು. ಸ್ಥಳೀಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿತ್ರಗಳು ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಎಫ್ಐಆರ್ ದಾಖಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ರಣರಾಗಿಣಿ ಮಹಿಳಾ ಮಂಡಳದ ಅಧ್ಯಕ್ಷರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.