ಸಕಲೇಶಪುರ: ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿ ಸಮಾಧಾನ ತಂದಿಲ್ಲ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಹೆಬ್ಬನಹಳ್ಳಿ ಗ್ರಾಮದಲ್ಲಿ ಮಾತನಾಡಿ, ಎತ್ತಿನಹೊಳೆ ಕಾಮಗಾರಿ ಪರಿಶೀಲನೆಗೆ ಎರಡನೇ ಬಾರಿ ಬಂದಿದ್ದೀನಿ, 24 ಸಾವಿರ ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದೆ. ಆದರೂ ಪ್ರಗತಿ ನನಗೆ ಸಮಾಧಾನ ತಂದಿಲ್ಲ, ಹಾಗಾಗಿ ಇಂದು ಭೇಟಿ ನೀಡಿದ್ದೇನೆ. ಅನೇಕ ಸಮಸ್ಯೆಗಳನ್ನು ಗುತ್ತಿಗೆದಾರರು, ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಅನೇಕ ಅಡಚಣೆಗಳು ಬರುತ್ತಿವೆ. ಯಾರೋ ಒಬ್ಬ 10 ಸಾವಿರ ಇಟ್ಕೊಂಡು ಯೋಜನೆ ಮುಂದುವರಿಯಲು ಬಿಡ್ತಿಲ್ಲ ಎಂಬ ದೂರು ಬಂದಿವೆ ಎಂದರು.
ನೂರು ದಿನದಲ್ಲಿ ನೀರನ್ನು ಪಂಪ್ ಔಟ್ ಮಾಡಬೇಕು ಎಂದು ಟೈಂ ಬಾಂಡ್ ಕೊಟ್ಟಿದ್ದೀನಿ. ಎಲ್ಲಾ ಅಧಿಕಾರಿಗಳಿಗೂ ಜವಾಬ್ದಾರಿ ಕೊಟ್ಟಿದ್ದೀನಿ. ಸರಾಗವಾಗಿ ಕೆಲಸ ನಡೆಯಲಿ ಎಂದಿದ್ದೇನೆ. ವಿಜಯದಶಮಿ ದಿನ ನೀರು ಹರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದರಲ್ಲಿ ನನಗೆ ನಂಬಿಕೆಯಿಲ್ಲ, ನೂರು ದಿನದಲ್ಲಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ನೂರು ದಿನದಲ್ಲಿ ನೀರು ಹರಿಯುವ ಭರವಸೆ ನನಗಿದೆ ಎಂದರು. ರೈತರಿಗೆ ಉಳಿದಿರುವ ಪರಿಹಾರ ನೀಡಲು ಪಟ್ಟಿ ತಯಾರು ಮಾಡಲು ಹೇಳಿದ್ದೀನಿ. ಗುತ್ತಿಗೆದಾರರು ನಾಳೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಟೈಂ ಲೈನ್ ಫಿಕ್ಸ್ ಮಾಡಿದ್ದೇವೆ, ನೋಡೋಣ ಏನ್ ಆಗುತ್ತೆ ಅಂತ ಎಂದು ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ : ‘INDIA ಮೈತ್ರಿಗಾಗಿ ಸ್ಟಾಲಿನ್ ಜೊತೆ ಡಿ.ಕೆ ಶಿವಕುಮಾರ್ ಒಳ ಒಪ್ಪಂದ’
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ಸಣ್ಣ ಚಿತ್ತಯ್ಯ, ಯೋಜನೆ ಬಗ್ಗೆ ಮಾಹಿತಿ ನೀಡಿ ಪಶ್ಚಿಮಘಟ್ಟದ ಮೇಲ್ದಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10,064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದುಮಾಹಿತಿ ನೀಡಿದರು. 261 ಕಿ.ಮೀ ನಂತರ ಲಿಫ್ಟ್ ಮೂಲಕ 12.338 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗೆ 287 ಕೆರೆಗಳ ಭರ್ತಿಗೆ ನೀರು ಹರಿಸಲಾಗುವುದು. ಒಟ್ಟು ಯೋಜನೆಯ ಪರಿಷ್ಕೃತ ಮೊತ್ತ 23,251.6 ಕೋಟಿರೂ. ಆಗಿದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.