ಬೆಂಗಳೂರು: ‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ’ ಎಂಬ ನಟ ಪ್ರಕಾಶ್ ರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಡಿ.ವಿ. ಸದಾನಂದಗೌಡ, ‘ಹುಚ್ಚ ಕೂಡಾ ಪ್ರಕಾಶ್ ರಾಜ್‌ಗಿಂತ ಚೆನ್ನಾಗಿ ಮಾತಾಡ್ತಾನೆ. ಅವರಿಗೆ ನಾಟಕ ಮಾಡಿ ಅಭ್ಯಾಸ; ಚಿತ್ರಗಳಲ್ಲಿ ನಟಿಸಿ ಅಭ್ಯಾಸವೇ ಹೊರತು ಅವರ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ’ ಎಂದು ಸಂಸದ ಡಿ.ವಿ. ಸದಾನಂದಗೌಡ ತಿರುಗೇಟು ಕೊಟ್ಟರು.
ಈ ಬಗ್ಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಕೇವಲ ಬಾಲಿಶ ಮಾತುಗಳನ್ನಾಡುವುದು ಇಂಥ ದೊಡ್ಡ ವ್ಯಕ್ತಿಗಳಿಗೆ ಗೌರವ ತರಲ್ಲ. ಅವರ ಹಿರಿಯರು ಯಾರು ಅಂತ ನಮಗೆ ಗೊತ್ತಿಲ್ಲ. ಆದರೆ, ಇದು ಅವರ ಹುಚ್ಚುತನದ ಪರಮಾವಧಿ. ಹುಚ್ಚ ಕೂಡಾ ಪ್ರಕಾಶ್ ರಾಜ್ ಗಿಂತ (Prakash Raj) ಚೆನ್ನಾಗಿ ಮಾತಾಡ್ತಾನೆ. ಅವರಿಗೆ ಹುಚ್ಚುತನದ ಪರಮಾವಧಿ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ‘ಗೇಮ್ ಚೇಂಜರ್ಸ್ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ನೇಮ್ ಚೇಂಜರ್ಸ್ ಆಗಿದೆ’
ಹಿಂದೂ ಧರ್ಮ ಹುಟ್ಟಿನ ಕುರಿತು ಸಚಿವ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಹಿಂದೂ ಧರ್ಮದ ವ್ಯವಸ್ಥೆಯ ಮೂಲ ಸ್ವರೂಪ ರಾಮಾಯಣ, ಮಹಾಭಾರತದಲ್ಲಿದೆ. ಹಿಂದೂ ಧರ್ಮದ ಬೇರು ಆಳವಾಗಿದೆ, ಯಾರಿಂದಲೂ ಕಂಡು ಹಿಡಿಯಲು ಆಗಲ್ಲ. ಪರಮೇಶ್ವರ್ ಅವರಿಂದಲೂ ಕಂಡಿಹಿಡಿಯಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಧರ್ಮದ ವಿಚಾರ ಮಾತಾಡುವಾಗ ಪರಿಜ್ಞಾನ ಇಟ್ಟು ಮಾತಾಡಲಿ’ ಎಂದು ಡಿವಿಎಸ್ ಕಿಡಿಕಾರಿದರು.
ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ ವಿಚಾರವಾಗಿ ಮಾತನಾಡಿ, ‘ಕಳೆದ ವರ್ಷ ನಮ್ಮಿಂದ 60 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಆ ನೀರು ತಮಿಳುನಾಡಿನ ಜಲಾಶಯದಲ್ಲಿದೆ; ಸರ್ಕಾರ ಆ ನೀರಿನ ಲೆಕ್ಕಾಚಾರ ಮಾಡ್ತಿಲ್ಲ. ಇದರ ಬಗ್ಗೆ ಇತ್ತೀಚಿನ ಸರ್ವಪಕ್ಷ ಸಭೆಯಲ್ಲೂ ಹೇಳಿದ್ದೀವಿ. ಕೋರ್ಟ್ ವಾದ ಒಂದು ಕಡೆ, ಇನ್ನೊಂದು ಕಡೆ ವಸ್ತುಸ್ಥಿತಿಯನ್ನೂ ಗಮನಿಸಬೇಕು’ ಎಂದರು.
ಈ ಸಲ ಲೋಕಸಭೆ ಚುನಾವಣೆಗೆ ಡಿವಿಎಸ್ ನಿವೃತ್ತಿ ಘೋಷಿಸಿದ್ದಾರೆಂಬ ಶಾಸಕ ಯತ್ನಾಳ್ ಹೇಳಿಕೆಗೆ ಗರಂ ಆದ ಸಂಸದ ಡಿವಿಎಸ್, ‘ಟಿಕೆಟ್ ಬಗ್ಗೆ ತೀರ್ಮಾನ ಮಾಡೋರು ಯಾರೋ, ನಮ್ಮ ಕೇಂದ್ರ ಚುನಾವಣಾ ಸಮಿತಿ ಟಿಕೆಟ್ ತೀರ್ಮಾನ ಮಾಡುತ್ತೆ. ಟಿಕೆಟ್ ಬಗ್ಗೆ ಯಾರೋ ಏನೋ ಅಂತಾರೆ ಅಂದ್ರೆ ನಾವು ಉತ್ತರ ಕೊಡೋದು ಸರಿಯಲ್ಲ. ಯಾರ್ಯಾರೋ ಏನೇನೋ ಹೇಳೋದಿಕ್ಕೆ ನಾವ್ಯಾಕೆ ಉತ್ತರ ಕೊಡಬೇಕು’ ಎಂದು ತಿರುಗೇಟು ಕೊಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.