Sunday, September 24, 2023
spot_img
- Advertisement -spot_img

ಮಂಜುನಾಥ್‌ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ : ಸಂಸದ ಪ್ರಜ್ವಲ್‌ ರೇವಣ್ಣ

ಸಕಲೇಶಪುರ : ಪ್ರಜಾಪ್ರಭುತ್ವದಲ್ಲಿ ಶಾಂತಿ ರೂಪದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ಕಸಿಯುವ ಪ್ರಯತ್ನ ಯಾರು ಕೂಡ ಮಾಡಬಾರದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಕಾಡಾನೆ ದಾಳಿಯಿಂದ ಮೃತ ಪಟ್ಟ ಮಹಿಳೆಯ ಕುಟುಂಬದ ಪರವಾಗಿ ನ್ಯಾಯ ಕೇಳಲು ತೆರಳಿದ್ದ ವೇಳೆ ಬಂಧನವಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಹೋರಾಟಗಾರ ಹಾಗು ಕೆಪಿಪಿಸಿ ಸದಸ್ಯ ಯಡೇಹಳ್ಳಿ ಆರ್ ಮಂಜುನಾಥ್ ಮನೆಗೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಂಜುನಾಥ್ ಪಕ್ಷ ಬೇರೆ ಮರೆತು ಹೋರಾಟ ನಡೆಸುವ ವ್ಯಕ್ತಿಯಾಗಿದ್ದಾರೆ. ಆಡಳಿತ ವ್ಯವಸ್ಥೆ ಹಾಗೂ ಸರ್ಕಾರದ ಲೋಪಗಳು ಕಂಡು ಬಂದಾಗ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಎಂದರು.

ಸಂಸದನಾಗಿ ನನ್ನ ಮೇಲು ಕೂಡ ಕೆಲವು ಬಾರಿ ಪ್ರತಿಭಟನೆ ನಡೆಸಿರುವುದು ಉಂಟು ಈ ರೀತಿ ತಾಲೂಕಿನಲ್ಲಿ ಅಭಿವೃದ್ಧಿಗೆ ತಮ್ಮದೇ ಶೈಲಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ, ಇಂಥ ಹಿರಿಯ ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳಿಸಿದ್ದು ಅಕ್ಷಮ್ಯ ಎಂದು ಕಿಡಿಕಾರಿದರು.

ನನ್ನ ವಿರುದ್ಧವು ಹೋರಾಟ ನಡೆಸಿದಾಗ ನಾನು ಅದನ್ನು ಸಲಹೆಯಾಗಿ ಸ್ವೀಕರಿಸಿದ್ದೇನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಧಿಕಾರ ಇದೆಯೆಂದು ದುರ್ಬಳಕೆ ಮಾಡಿಕೊಂಡು ಹಗೆ ಸಾಧಿಸುವುದು ತಪ್ಪು. ಅವರ ಹೋರಾಟ ಗಮನಿಸಿ ಅದರಿಂದ ಉಪಯುಕ್ತ ಮಾಹಿತಿಗಳನ್ನು ಪಡೆದು ಕೆಲಸ ಮಾಡಿದ್ದೇನೆ ಹೊರತು ವೈಶಮ್ಯ ಸಾಧಿಸಲು ಮುಂದಾಗಿಲ್ಲ ಎಂದರು.

ಇದನ್ನೂ ಓದಿ: ‘2024ಕ್ಕೆ ನಾನು ಹಿಂತಿರುಗುತ್ತೇನೆ’; ಬಿಜೆಪಿ ‘ಟರ್ಮಿನೇಟರ್’ ಪೋಸ್ಟ್‌ ವೈರಲ್!

ರೈತರು ಬೆಳೆಗಾರರ ಹಾಗೂ ಜನರ ಪರ ಹೋರಾಟ ನಡೆಸಿದ ಮಂಜುನಾಥ್ ಕಠಿಣವಾದ ಸೆಕ್ಷನ್ ಹಾಕಿದ್ದಾರೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ನಾಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿರಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ. ಮಂಜುನಾಥ್ ಧೈರ್ಯಗೆಡುವ ಅವಶ್ಯಕತೆ ಇಲ್ಲ ಅವರೊಂದಿಗೆ ನಾವೆಲ್ಲರೂ ಇದ್ದೇವೆ. ಈ ಪ್ರಕರಣದ ಹಿಂದೆ ಹಲವಾರು ಅನುಮಾನಗಳಿವೆ ಬಂಧಿತರಾದ 11 ಜನರ ಪೈಕಿ ಎರಡು ಮೂರು ಜನರ ಮೇಲೆ ಇದ್ದಂತಹ ಗಂಭೀರವಾದ ಆರೋಪಗಳಲ್ಲಿ ಸೇರಿಸಿ ಪ್ರಕರಣ ದಾಖಲು ಮಾಡುವಾಗ ಯಡೇಹಳ್ಳಿ ಮಂಜುನಾಥ್ ಅವರನ್ನು ಸೇರಿಸಿ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.

ಹರಿರಾಮ್‌ ಶಂಕರ್‌ ಡೈನಾಮಿಕ್ ಎಸ್ಪಿ

ಇನ್ನೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವರಿಷ್ಠಾಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ 38 ಕೊಲೆ ನಡೆದಿದ್ದವು ಈ ಬಾರಿ ಅದನ್ನು 19ಕ್ಕೆ ಇಳಿಸಿದ್ದಾರೆ. ಜಿಲ್ಲೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಡೈನಮಿಕ್ ಎಸ್ ಪಿ ಯಾಗಿದ್ದಾರೆ. ಆದರೆ ಕೆಲವೊಂದು ಸೂಕ್ಷ್ಮತೆ ಅರಿತುಕೊಳ್ಳಲು ವಿಫಲರಾಗಿದ್ದಾರೆ ಎಂದೆನಿಸುತ್ತದೆ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ 78 ಜನರು ಮೃತಪಟ್ಟಿದ್ದಾರೆ. ಈ ಭಾಗದ ಜನರ ಆಕ್ರೋಶ ಮುಗಿಲೆದ್ದಿದ್ದು ಈ ವಿಚಾರದಲ್ಲಿ ಎಸ್ಪಿ ಹರಿರಾಮ್ ಶಂಕರ್ ಗಮನಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘ಕೇಜ್ರಿವಾಲ್ ಮುಂದಿನ ಪ್ರಧಾನಿ ಅಭ್ಯರ್ಥಿ’; ಮೈತ್ರಿಕೂಟ ಸಭೆಗೂ ಮುನ್ನ ಶಾಕ್ ಕೊಟ್ಟ ಆಪ್‌!

ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅಕ್ಕ ಪಕ್ಕದ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ ಅತಿ ಹೆಚ್ಚು ಕಾಡಾನೆ ಭಾದಿತ ಪ್ರದೇಶ ಸಕಲೇಶಪುರಕ್ಕೆ ಭೇಟಿ ನೀಡಿರುವುದು ದುರಂತವಾಗಿದೆ. ಇಲ್ಲಿ ಬೆಳೆ ಜೊತೆಗೆ ಮನುಷ್ಯರ ಪ್ರಾಣ ಹಾನಿ ಕೂಡ ಹೆಚ್ಚಾಗುತ್ತಿದೆ ಈ ಬಗ್ಗೆ ಸೌಜನ್ಯಕಾದರೂ ಅರಣ್ಯ ಸಚಿವರು ಭೇಟಿ ನೀಡಬೇಕಾಗಿತ್ತು. ಬಿಜೆಪಿ ಅವಧಿಯಲ್ಲಿ ಮೂರು ಅರಣ್ಯ ಸಚಿವರನ್ನು ಕಂಡಿದ್ದೇವೆ ಆದರೆ ಪರಿಹಾರ ಮಾತ್ರ ಶೂನ್ಯ. ಕೂಡಲೇ ಅರಣ್ಯ ಸಚಿವರು ತಾಲೂಕಿಗೆ ಭೇಟಿ ನೀಡಿ ಕಾಡಾನೆ ಹಾವಳಿ ಬಗ್ಗೆ ಕೂಲಂಕುಶವಾಗಿ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದರು.

ಕಾಡಾನೆ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಈ ಕುರಿತಂತೆ ತಾಲೂಕಿನಲ್ಲಿ ಸಭೆ ಏರ್ಪಡಿಸಿ ರೈತರು ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ ಸಲಹೆ ಸ್ವೀಕರಿಸಿ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಸಭೆ ನಡೆಸುವ ನೆಪದಲ್ಲಿ ಸಮಯ ವ್ಯರ್ಥ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.‌

ಇಡೀ ದಿನ ತಾಲೂಕಿನಲ್ಲಿದ್ದು ಹೋಬಳಿ ಅವರು ಸಮಸ್ಯೆಗಳನ್ನು ಆಲಿಸಿದಾಗ ಮಾತ್ರ ಇಲ್ಲಿನ ಸಂಕಷ್ಟ ಅರಿವಿಗೆ ಬರಲಿದೆ. ನಾವು ಮಾತನಾಡಿದರೆ ಅದನ್ನು ರಾಜಕೀಯವಾಗಿ ಸರ್ಕಾರ ಪರಿಗಣಿಸುತ್ತದೆ. ಆದ್ದರಿಂದ ಖುದ್ದು ಸರ್ಕಾರವೇ ಇಲ್ಲಿಗೆ ಬಂದರೆ ಸಮಸ್ಯೆಯ ನಿಜ ಸ್ವರೂಪ ತಿಳಿಯಲಿದೆ. ಇಲ್ಲಿನ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಎದೆಯಲ್ಲಿ ಯಾವ ರೀತಿ ಆಕ್ರೋಶದ ಇದೆ ತಿಳಿಯಲು ಸರ್ಕಾರ ಮುಂದಾಗದಿರುವುದೇ ಬೇಸರದ ಸಂಗತಿ.

ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನದಲ್ಲಿ ಇಬ್ಬರು ಕಾಡಾನೆ ತುಳಿತಕ್ಕೆ ಸಾವನಪ್ಪಿದ್ದಾರೆ, ಇದುವರೆಗೂ 78 ಜನರು ಪ್ರಾಣ ಕಳೆದುಕೊಂಡಿದ್ದಾರೆ ಅರಣ್ಯ ಮಂತ್ರಿಗಳು ಕೂಡಲೇ ತಾಲೂಕಿಗೆ ಭೇಟಿ ನೀಡಿ ಇಲ್ಲಿಯೇ ವಾಸ್ತವ್ಯ ಹೂಡಿ ಜನರ ನಾಡಿಮಿಡಿತ ಅರಿಯಲು ಮುಂದಾಗಬೇಕೆಂದು ಸಲಹೆ ನೀಡಿದರು.
ತಾಲೂಕಿನ ಹೋರಾಟಗಾರರು ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಧೈರ್ಯಗೆಡುವ ಅವಶ್ಯಕತೆ ಇಲ್ಲ ಎಂದು ಹೋರಾಟಗಾರರಿಗೆ ಅಭಯ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles