ಮೈಸೂರು : ಮಂಡ್ಯ ಅಥವಾ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯು ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ ಎಂದರು. ಮಂಡ್ಯ ಮಾತ್ರವಲ್ಲದೇ ಇಡೀ ರಾಜ್ಯದ ಜನ ಸಾಮಾನ್ಯರ ಬದುಕು ಅಲ್ಲೋಲ ಕಲ್ಲೋಲವಾಗಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ಇವರ ಯಾವ ಧೈರ್ಯದ ಮೇಲೆ ಹೀಗೆ ಮಾತನಾಡುತ್ತಾರೆ ಎಂದು ನೆನೆಸಿಕೊಂಡರೆ ನನಗೆ ಗೊಂದಲವಾಗುತ್ತದೆ ಎಂದರು.
ಯಡಿಯೂರಪ್ಪ ಅವರನ್ನು ಬಿಟ್ಟು ದೇವೇಗೌಡರನ್ನು ಆಹ್ವಾನಿಸಿ, ಅವರೊಟ್ಟಿಗೆ ಬಿಜೆಪಿಗರು ಚುನಾವಣಾ ಆತ್ಮೀಯತೆ ತೋರುತ್ತಿರುವುದನ್ನು ನೋಡಿದರೆ, ಈ ಬಾರಿಯೂ ಇವರ ಒಳ ಒಪ್ಪಂದದ ಚುನಾವಣೆಯ ಸಾಧ್ಯತೆಯು ದಟ್ಟವಾಗಿದೆ ಎಂದು ಅನಿಸುತ್ತದೆ. ಆಹಾರ ಯೋಜನೆಗಳಿಂದ ಎಂದಿಗೂ ಆರ್ಥಿಕತೆ ನಷ್ಟವಾಗುವುದಿಲ್ಲ.
ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ 1 ವರ್ಷ ಉಚಿತ ಪಡಿತರ ವಿತರಿಸಲು ಕೇಂದ್ರ ನಿರ್ಧರಿಸಿದ್ದು, ಇದನ್ನು ಬಡವರ ಬಗ್ಗೆ ಮೋದಿ ಅವರಿಗೆ ಎಂತಹ ಕಾಳಜಿ ಇದೆ ನೋಡಿ ಎಂದು ಬಿಜೆಪಿಗರು ಹೇಳಲು ಆರಂಭಿಸಿದ್ದಾರೆ ಎಂದು ಜರಿದಿದ್ದಾರೆ.