ಶಿವಮೊಗ್ಗ: ಸಿದ್ದರಾಮಯ್ಯ ಅಲೆಮಾರಿಯಂತೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುತ್ತಿದ್ದಾರೆ. ಇವತ್ತಿಗೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದೇ ಗೊತ್ತಿಲ್ಲದ ವ್ಯಕ್ತಿ ರಾಜ್ಯ ಆಳುತ್ತಾರಾ? ಎಂದು ಕುಟುಕಿದರು. ಬಿಜೆಪಿ ಪಕ್ಷಕ್ಕೆ ಒಳ್ಲೆಯ ಸಪೋರ್ಟ್ ಇದೆ, ಮುಂದೆ ಸಹ ಇರುತ್ತದೆ. ಹಿಂದೆಲ್ಲ ಬೆರಳೆಣಿಕೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಸಿಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ, ರಾಜ್ಯದ 224 ಕ್ಷೇತ್ರದಲ್ಲೂ ಪಕ್ಷದ ಸಂಘಟನೆ ಬಲಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಿ.ಕೆ.ಶಿವಕುಮಾರ್‌ಗೆ ಏನು ಮಾತನಾಡಬೇಕೆಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ ಎಂದು ಹೇಳುತ್ತಾರೆ. ಇವರ ನಿರ್ಣಯವೇ ಮುಖ್ಯ ಅಲ್ಲ, ಇದುವರೆಗಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಹೀಗಾಗಿ ಪ್ರತಿ ಬೂತ್‌ನಲ್ಲಿ ವಿಜಯಗಳಿಸಿ ಸಂಪೂರ್ಣ ಬಹುಮತ ಪಡೆಯುವುದಕ್ಕಾಗಿ ಬೂತ್ ವಿಜಯ್ ಅಭಿಯಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಬೂತ್ ವಿಜಯ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಎಲ್ಲಡೆ ಸಿಗುತ್ತಿದ್ದು, ಸಂಪೂರ್ಣ ಬಹುಮತ ಪಡೆಯುವುದೇ ಈ ಅಭಿಯಾನದ ಉದ್ದೇಶ ಎಂದು ವಿವರಿಸಿದರು. ಪಕ್ಷದ ವಿಚಾರಧಾರೆ ಮತ್ತು ಸಿದ್ಧಾಂತ, ಅಭಿವೃದ್ಧಿ ಮತ್ತು ನಾಯಕತ್ವ ಈ ಮೂರು ವಿಚಾರಗಳ ಬಗ್ಗೆ ಪಕ್ಷ ಗಮನಹರಿಸಿದೆ ಎಂದರು.