ಬೆಂಗಳೂರು: ಮಾಜಿ ಸಚಿವರು ಮತ್ತೆ ಹಿಂದಿನ ಸ್ಥಾನಕ್ಕೆ ಬರಬಾರದು; ಅವರು ನಿಗಮ ಮಂಡಳಿಗೆ ಬೇಡಿಕೆ ಇಡಬಾರದು. ಈ ಹಿಂದೆ ಇದ್ದ ಸ್ಥಾನಕ್ಕಿಂತ ಮೇಲಿನ ಸ್ಥಾನಕ್ಕೆ ಹೋಗಬೇಕು, ಕೆಳಗೆ ಬರಬಾರದು’ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸಚಿವರನ್ನು ಶಾಸಕರು ದೂರುತ್ತಿದ್ದಾರೆ. ಶಾಸಕರನ್ನು ಕಾರ್ಯಕರ್ತರು ದೂರುತ್ತಿದ್ದಾರೆ. ಶಾಸಕರು ಆನ್ಯತ ಭಾವಿಸದೇ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಶಂಕರ್ (BL Shankar) ಸಲಹೆ ನೀಡಿದರು.
‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 42.88% ರಷ್ಟು ಮತ ಬಂದಿದೆ. ಬಿಜೆಪಿ ಗೆ 36%ರಷ್ಟು ಮತ ಹೋಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 12 ಕೋಟಿ ಜನ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮತದಾರರ ಸಂಖ್ಯೆ ಹೆಚ್ಚಾಗುತ್ತೆ ವಿನಃ ಕಡಿಮೆಯಾಗಲ್ಲ’ ಎಂದು ಹೇಳಿದರು.
ಇದನ್ನೂ ಓದಿ; ‘ನನಗೆ ಕ್ಯಾನ್ಸರ್ ಆಗಿಲ್ಲ, ಗಡ್ಡೆನೂ ಇಲ್ಲ, ಆಪರೇಷನ್ ಅಗತ್ಯವಿಲ್ಲ’
‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ; ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಎಲ್ಲರನ್ನು ಒಳಗೊಂಡಂತೆ ಎಂಬಿ ಪಾಟೀಲ್ (MB Patil) ರಾಜ್ಯ ಪ್ರವಾಸ ಮಾಡಿದ್ದಾರೆ. ತಂದೆಯವರಂತೆ ಅವರಿಗೂ ಸಾಕಷ್ಟು ರಾಜಕೀಯ ಅನುಭವ ಇದೆ. ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂಬಿ ಪಾಟೀಲ್ ಹೆಸರು ಶಾಶ್ವತ. ಬಿಜಾಪುರ, ಮಲೆನಾಡು ಭಾಗದಲ್ಲಿ ಎಂಬಿ ಪಾಟೀಲ್ ಹೆಸರು ಚಿರಾಯವಾಗಿರುತ್ತೆ. ಬರವನ್ನು ಹೇಗೆ ನೀಗಸಬೇಕೆಂದು ಚೆನ್ನಾಗಿ ಅವರಿಗೆ ಗೊತ್ತು’ ಎಂದು ಪ್ರಶಂಸಿದರು.
‘ಈಗ ಅವರಿಗೆ ಕೈಗಾರಿಕಾ ಸಚಿವರ ಸ್ಥಾನ ಇಷ್ಟ ಇದ್ದೀಯೋ ಇಲ್ಲವೊ ಗೋತ್ತಿಲ್ಲಾ. ಆದರೆ, ಅವರಿಗೆ ಕೊಟ್ಟಿದ್ದಾರೆ; ಆ ಸ್ಥಾನದಲ್ಲಿ ಅವರಿಗೆ ಯಶಸ್ಸು ಸಿಗಲಿ. ಸರ್ಕಾರದ ಮುಂದೆ ಅನೇಕ ಸವಾಲುಗಳಿವೆ. ತಾಲೂಕು, ಜಿಲ್ಲಾ, ಬಿಬಿಎಂಪಿ, ಲೋಕಸಭೆ ಚುನಾವಣೆಗಳು ನಡೆಯಬೇಕಾಗಿದೆ. ಜಿಲ್ಲಾ-ತಾಲೂಕು ಪಂ. ಚುನಾವಣೆಗಳು ಈ ವರ್ಷಾಂತ್ಯಕ್ಕೆ ನಡೆಯಬೇಕಾಗಿದೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ’ ಎಂದು ಹೇಳಿದರು.
ಇದನ್ನೂ ಓದಿ; ನೋಟಿಸ್ ಕೊಟ್ಟರೂ ಕೇರ್ ಮಾಡ್ತಿಲ್ಲ ಹೊನ್ನಾಳಿ ಮಾಜಿ ಶಾಸಕ; ಬಿಜೆಪಿಗೆ ಬಿಸಿ ತುಪ್ಪವಾದ ಎಂಪಿಆರ್!
ತಿಂಗಳೊಳಗೆ ಪದಾಧಿಕಾರಿಗಳ ಆಯ್ಕೆಯಾಗಬೇಕು
ಈ ತಿಂಗಳ ಒಳಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಆಗಬೇಕು; ಜಿಲ್ಲಾ ಸಚಿವರು ಪದಾಧಿಕಾರಿಗಳ ಆಯ್ಕೆಗೆ ಮುಂದಾಗಬೇಕು. ಇಲ್ಲವಾದ್ರೆ ಮುಂದೆ ನೀತಿ ಸಂಹಿತೆ ಜಾರಿಯಾಗುತ್ತೆ. ಆಗ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಫಲಾನುಭವಿಗಳ ಕಾರ್ಯಕ್ರಮ ಮಾಡಬೇಕು. ಕಾಂಗ್ರೆಸ್ ಸರ್ಕಾರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಬೇಕು. ಗೃಹಲಕ್ಷ್ಮಿ ಪ್ರಚಾರ ಬಹಳಷ್ಟು ಯಶಸ್ವಿಯಾಗಿದೆ. ಆದರೂ ಪ್ರಚಾರ ಮಾಡಲು ಕಾಂಗ್ರೆಸ್ ಹಿಂದೆ ಇರುತ್ತೆ, ಕೆಲಸ ಮಾಡಲು ಮುಂದೆ ಇರುತ್ತೆ. ಬಿಜೆಪಿ ಪ್ರಚಾರ ಮಾಡಲು ಮುಂದೆ ಇದೆ, ಕೆಲಸದಲ್ಲಿ ಹಿಂದೆ ಇದೆ’ ಎಂದರು.
‘ಶಾಸಕರು ಆನ್ಯತ ಭಾವಿಸದೇ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ಕೊಡಬೇಕು; ಲೋಕಸಭೆ ಚುನಾವಣೆಯಲ್ಲಿ ಹಿರಿಯ ಮುಖಂಡರನ್ನು ನೇಮಕ ಮಾಡಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕು. ಸೂಕ್ತ ಅಭ್ಯರ್ಥಿಯ ಬಗ್ಗೆ ಪರಿಶೀಲನೆ ನಡೆಸಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದೆ. ಜೆಡಿಎಸ್ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತೆ’ ಎಂದು ಬಿ.ಎಲ್. ಶಂಕರ್ ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.