ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸರನ್ನ ಬಿಟ್ಟು ವಸೂಲಿ ಮಾಡ್ತಾ ಇದ್ದಾರೆ; ಈ ಬಗ್ಗೆ ಪೊಲೀಸರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದ್ದು, ಈ ಸರ್ಕಾರ ಮಾತಿಗೆ ತಪ್ಪಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀರಾವರಿ ಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ; ಗ್ಯಾರಂಟಿಗಳನ್ನಾದ್ರು ಸರಿಯಾಗಿ ಕೊಡ್ತಿಲ್ಲ. ಖಾಸಗಿ ವಲಯದಲ್ಲಿ ಅಭಿವೃದ್ಧಿಯೇ ನಿಂತು ಹೋಗಿದೆ. ಈ ಸರ್ಕಾರ ರಾಜ್ಯವನ್ನು ಅದೋಗತಿಗೆ ತಗೊಂಡು ಹೋಗ್ತಿದೆ. ಇದರ ಬಗ್ಗೆ ಬಿಜೆಪಿ ಸದನ ಒಳಗೆ ಹಾಗೂ ಹೊರಗೆ ಕೈಗೆತ್ತಿಕೊಳ್ಳಲಿದೆ’ ಎಂದು ಸರಣಿ ಆರೋಪ ಮಾಡಿದರು.
‘ಕಾಂಗ್ರೆಸ್ ಸಂಪೂರ್ಣವಾಗಿ ಬಹುಮತ ಪಡೆದು ಸರ್ಕಾರ ರಚಿಸಿದೆ. ಮುಂದಿನ ಐದು ವರ್ಷದ ಅಭಿವೃದ್ಧಿ ದಿಕ್ಸೂಚಿ ಹೇಳಬೇಕಿದ್ದ ಸರ್ಕಾರ ದಿಕ್ಕು ತಪ್ಪಿದ ಸರ್ಕಾರವಾಗಿದೆ. ಹಲವಾರು ವಿಷಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿ, ಹಣಕಾಸು ವ್ಯವಸ್ಥೆಯ ಹಳಿ ತಪ್ಪಿದೆ. ನಾವು ‘ಸರ್ ಪ್ಲಸ್’ ಬಜೆಟ್ ಮಂಡನೆ ಮಾಡಿದ್ದೆವು. ನಮಗಿಂತ ₹8 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಜನರ ಮೇಲೆ ಹೆಚ್ಚಿನ ಟ್ಯಾಕ್ಸ್ ಹಾಕಿದ್ದಾರೆ’ ಎಂದು ಕಿಡಿಕಾರಿದರು.
ಇದನ್ನೂ ಓದಿ; ‘ಸಿಎಂ ಕಚೇರಿಯಿಂದ ಪಂಚಾಯತ್ ವರೆಗೆ ಭ್ರಷ್ಟಾಚಾರದ ವಾಸನೆ’
‘ರಾಜ್ಯ ಕೊರೊನಾ ಸಂದರ್ಭದಲ್ಲಿ ಎದುರಿಸುತ್ತಿದ್ದ ಇದ್ದ ಹಣಕಾಸಿನ ಸ್ಥಿತಿಯನ್ನು ಇಂದು ತಂದೊಡ್ಡಿದ್ದಾರೆ; ಸರ್ಕಾರಿ ನೌಕರರ ಸಂಬಳ ತಡವಾಗ್ತಿದೆ. ಈ ಸರ್ಕಾರ ಬಂದ ಮೇಲೆ ಒಂದು ಕಿಮೀ ರಸ್ತೆಯನ್ನೂ ಮಾಡಿಲ್ಲ. ಬರಗಾಲ ಬಂದಮೇಲೂ ರೈತರ ಬಳಿ ಹೋಗಿಲ್ಲ. ಸಕಾಲಕ್ಕೆ ಸಾಲವೂ ಸಿಗ್ತಾ ಇಲ್ಲ. ಹೀಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ. ಕಳೆದ ಎರಡು ತಿಂಗಳಲ್ಲಿ 40ಕ್ಕೂ ಅಧಿಕ ರೈತರು ಆತ್ಮಹತ್ಯೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ಆದಾಗ ಪರಿಹಾರ ಕೊಡೋ ಬದಲು, ಆಗೋ ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಕೃಷಿ ಇಲಾಖೆಯಲ್ಲಿ ಟ್ರಾನ್ಸಫರ್ ಸುಗ್ಗಿ!
‘ಕೃಷಿ ಇಲಾಖೆಯಲ್ಲಿ ಟ್ರಾನ್ಸಫರ್ ಸುಗ್ಗಿ ನಡೆಯುತ್ತಿದೆ; ಇದೊಂದೆ ಅಲ್ಲ, ಎಲ್ಲ ಇಲಾಖೆಯಲ್ಲೂ ಇದೇ ಆಗ್ತಿದೆ. ರೈತರಿಗೆ ಸಂಬಂಧಪಟ್ಟ ಯೋಜನೆಗಳನ್ನ ನಿಲ್ಲಿಸಿ, ಇದು ರೈತ ವಿರೋಧಿ ಸರ್ಕಾರವಾಗಿದೆ. ದಲಿತರ ಬಗ್ಗೆ ಭಾರೀ ತೋರಿಕೆ ಕಾಳಜಿ ಮಾತಾಡ್ತಾರೆ. ನಮ್ಮ ಕಾಲದಲ್ಲಿ ಶುರುವಾದ 100 ಹಾಸ್ಟೆಲ್‌ಗಳಿಗೆ ಇವರು ಅನುದಾನ ಕೊಟ್ಟಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಜನಕ್ಕೆ ‘ಕಾಮ್ ಕಿ ಬಾತ್’ ಬೇಕು ‘ಮನ್ ಕಿ ಬಾತ್’ ಅಲ್ಲ: ಸಲೀಂ ಅಹಮದ್
‘ಭ್ರಷ್ಟಾಚಾರದ ಬಗ್ಗೆ ಇವರು ಸತ್ಯ ಹರಿಶ್ಚಂದ್ರನ ರೀತಿ ಮಾತಾಡಿದ್ರು; ಈಗ ಭ್ರಷ್ಟಾಚಾರ ಹಗಲು ದರೋಡೆಯಾಗಿದೆ. ಮಂತ್ರಿಗಳು ಮತ್ತು ಸಿಎಂ ಆಫೀಸ್ ನಲ್ಲಿ ಗಲಾಟೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹುದ್ದೆ ಹರಾಜಿಗಿಟ್ಟು ಟ್ರಾನ್ಸಪರ್ ಮಾಡ್ತಾ ಇದ್ದಾರೆ. ಒಂದೊಂದು ಪೋಸ್ಟ್‌ಗೂ ದರ ನಿಗದಿ ಮಾಡಿದ್ದಾರೆ. ಯಾರದ್ದೂ ಭಯ ಇಲ್ಲದೇ ವರ್ಗಾವಣೆ ಮಾಡ್ತಾ ಇದ್ದಾರೆ. ಯಾರಾದ್ರೂ ಮಾತಾಡಿದ್ರೆ ಅವರ ಮೇಲೆ ಕೇಸ್ ಹಾಕ್ತಾರೆ’ ಎಂದು ಆರೋಪಿಸಿದರು.
‘ಕಾವೇರಿ ವಿಚಾರವಾಗಿ ನಮ್ಮ ರೈತರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ವಪಕ್ಷ ಸಭೆಯಲ್ಲೂ ನಾನು ಇದನ್ನೇ ಮಾತಾಡಿದ್ದೇನೆ. ಮೇಲ್ಮನವಿ ಹಾಕ್ತೀವಿ ಅಂತಿದ್ದಾರೆ, ಸುಪ್ರೀಂಗೆ ಅರ್ಜಿ ಹಾಕ್ತೀವಿ ಅಂದ್ರು. ಮೇಲ್ಮನವಿ ಹೋಗ್ತೀವಿ ಅಂದವರು ಇನ್ನೂ ಉತ್ತರ ಕೊಡುವ ಜಾಗದಲ್ಲಿ ನಿಂತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಇದರ ಬಗ್ಗೆ ಅವರಿಗೆ ಎಳ್ಳಷ್ಟು ಕಾಳಜಿ ಇಲ್ಲ’ ಎಂದು ಬೊಮ್ಮಾಯಿ ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.