ಬೆಂಗಳೂರು: ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ನನ್ನ ಮತ್ತು ಡಿಕೆ.ಶಿವಕುಮಾರ್ ನಡುವೆ ಬಿರುಕು ಮೂಡಿಸಲು ನಕಲಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದಾರೆ. “ನಾವು ಇದರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಮತ್ತು ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಗುಂಪುಗಾರಿಕೆ ಇದೆ. ಇದು ಬಂಡಾಯಕ್ಕೆ ಕಾರಣವಾಗುತ್ತದೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಬಿಂಬಿಸಲಾಗಿದೆ.
ಈ ದುಷ್ಕೃತ್ಯದ ಹಿಂದಿನ ದುರುಳರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುತ್ತಾರೆಂದು ನಂಬಿದ್ದೇನೆಂದು ತಿಳಿಸಿದ್ದಾರೆ. ನಮ್ಮ ಒಗ್ಗಟ್ಟು ಮತ್ತು ನಮ್ಮ ಜನರ ಬದ್ಧತೆ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.