Monday, December 4, 2023
spot_img
- Advertisement -spot_img

ತಮಿಳುನಾಡಿಗೆ ಕಾವೇರಿ ನೀರು : ಹೆಚ್ಚಾಯ್ತು ಸಕ್ಕರೆ ನಾಡಲ್ಲಿ ಪ್ರತಿಭಟನೆಯ ಕಾವು!

ಮಂಡ್ಯ : ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ದಿನೇ ದಿನೇ ಕಾವೇರಿ ಕಿಚ್ಚು ಹೆಚ್ಚಾಗುತ್ತಿದೆ. ಒಂದು ಕಡೆ ಅನ್ನದಾತರು, ಇನ್ನೊಂದು ಕಡೆ ರೈತ ಸಂಘಟನೆಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ಇಂದು ಜೆಡಿಎಸ್ ಇನ್ನಷ್ಟು ಬಲ ತುಂಬಲಿದೆ. ಈ ಹಿಂದೆ ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಜೆಡಿಎಸ್ ಒತ್ತಾಯಿಸಿತ್ತು.

ಇದನ್ನೂ ಓದಿ : ಜೋಡಿ ಕೊಲೆ ಕೇಸ್ : ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ

ಆದರೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನಿರಂತರವಾಗಿ ನಾಲ್ಕು ದಿನಗಳಿಂದ ತಮಿಳನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಜೆಡಿಎಸ್ ಬೀದಿಗಿಳಿಯಲಿದೆ.

ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್‌ನಿಂದ, ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಹಾಲಿ, ಮಾಜಿ ಜೆಡಿಎಸ್ ಶಾಸಕರು, ನಾಯಕರು, ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ಕುಸಿದ ಕಾವೇರಿ ನದಿ ನೀರಿನ ಮಟ್ಟ, ರೈತರಲ್ಲಿ ಮೂಡಿದ ಆತಂಕ..!
ನಿರಂತರವಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನಕಳೆದಂತೆ ಕುಸಿಯುತ್ತಿದೆ. ಸದ್ಯ 99 ಅಡಿಗೆ ಕೆಆರ್‌ಎಸ್ ನೀರಿನ ಮಟ್ಟ ಕುಸಿದಿದೆ. ಮಂಗಳವಾರ ರಾತ್ರಿ 101.78 ಅಡಿ ಇದ್ದ ನೀರಿನ ಮಟ್ಟ. ಇಂದು (ಶನಿವಾರ) 99.86 ಅಡಿಗೆ ಕುಸಿತ ಕಂಡಿದೆ. ಮಂಗಳವಾರ ರಾತ್ರಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆ 22 ಟಿಎಂಸಿಗೆ ನೀರಿನ ಸಾಂದ್ರತೆ ಕಡಿಮೆಯಾಗಿದೆ.

ಮಂಗಳವಾರ ರಾತ್ರಿ ಡ್ಯಾಂನಲ್ಲಿ 24.075 ಟಿಎಂಸಿ ನೀರು ಇತ್ತು. ಇಂದು ಡ್ಯಾಂನಲ್ಲಿರುವುದು 22.700 ಟಿಎಂಸಿ ಮಾತ್ರ ನೀರಿದ್ದು, ನಾಲ್ಕು ದಿನಗಳಲ್ಲಿ 2 ಟಿಎಂಸಿ ನೀರು ಖಾಲಿಯಾಗಿದೆ. ಇಂದೂ ಸಹ ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ 7,078 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 99.86 ಅಡಿಗಳು
ಗರಿಷ್ಠ ಸಾಂದ್ರತೆ – 49.452
ಇಂದಿನ ಸಾಂದ್ರತೆ – 22.700 ಟಿಎಂಸಿ
ಒಳ ಹರಿವು – 2,870 ಕ್ಯೂಸೆಕ್
ಹೊರ ಹರಿವು – 7,128 ಕ್ಯೂಸೆಕ್

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles