ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಧಾರವಾಡ ಜಿಲ್ಲೆ ಕುಂದಗೋಳ ಬಂದ್ ಗೆ ರೈತರು ಕರೆ ನೀಡಿದ್ದು, ಪಟ್ಟಣ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅನ್ನದಾತರು ಬಂದ್ ಘೋಷಣೆ ಮಾಡಿದ್ದು, ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಇರುವ ಗಾಂಧಿ ಚೌಕನಿಂದ ಗಾಳಿ ಮಾರೆಮ್ಮನ ದೇವಸ್ಥಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು ಐದು ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ರೈತರ ಬೇಡಿಕೆಗಳೇನು?
- ಕುಂದಗೋಳ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು
- ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು
- ಅನಾವೃಷ್ಠಿಯಿಂದ ಕಂಗೆಟ್ಟ ರೈತರಿಗೆ ಪ್ರತಿ ಹೆಕ್ಟೇರ್ ಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು
- 2018 ರಿಂದ ಇಲ್ಲಿಯವರೆ ರೈತರು ಬೆಳೆ ವಿಮೆ ತುಂಬುತ್ತಾ ಬಂದಿದ್ದಾರೆ. ಆದರೆ, ರೈತರಿಗೆ ವಿಮೆ ಹಣ ಬಂದಿಲ್ಲ. ಆದ್ದರಿಂದ 2018 ರಿಂದ ಬೆಳೆ ವಿಮೆ ನೀಡಬೇಕು. ಇತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ರೈತರು ಬಂದ್ ಆಚರಿಸಲು ಕರೆ ನೀಡಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿಯ ಐದನೇ ಸಭೆ ಬುಧವಾರ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದ 62 ತಾಲೂಕುಗಳಲ್ಲಿ ಮಾತ್ರ ಬರ ಪರಿಸ್ಥಿತಿ ಇದೆ ಎಂದು ವರದಿ ಬಂದಿತ್ತು. ನಾವು 140 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಲು ಸೂಚಿಸಿದ್ದೆವು. ಬೆಳೆ ಸಮೀಕ್ಷೆ ವರದಿ ನಿನ್ನೆ ಬಂದಿದೆ. ವರದಿ ಪ್ರಕಾರ, ಒಟ್ಟು 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಈ ಪೈಕಿ 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ. 40 ತಾಲೂಕೂಗಳಲ್ಲಿ ಮಳೆ ಕೊರತೆ ಇದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ, ಸಮೀಕ್ಷೆ ಮಾಡಿದಾಗ ಹಸಿರಿನ ಹೊದಿಕೆ ಇದೆ ಎಂದು ವರದಿ ಬಂದಿದೆ. ಮಳೆ ಕೊರತೆ ಇದ್ದರೂ ಕೂಡ ಕೇಂದ್ರದ ವರದಿಯಲ್ಲಿ ಬರ ಪರಿಸ್ಥಿ ಇದೆ ಎಂದು ಘೋಷಣೆ ಮಾಡಿಲ್ಲ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.