ಧಾರವಾಡ: ರಾಜ್ಯಾದ್ಯಂತ ಬರಗಾಲ ಆವರಿಸಿ ದೀಪಾವಳಿ ಹಬ್ಬಕ್ಕೆ ಕಾರ್ಮೋಡ್ ಬಡಿದರೂ ಸಹ ಜಿಲ್ಲೆಯಲ್ಲಿ ರೈತರು ಅದನ್ನ್ಯಾವುದನ್ನು ಲೆಕ್ಕಿಸದೆ ಬರಕ್ಕೆ ಸೆಡ್ಡು ಹೊಡೆದು ವಿನೂತನವಾಗಿ ಬಂಗಾರದ ದೀಪಾವಳಿ ಆಚರಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.
ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ನುಗ್ಗಿಕೇರಿಯಲ್ಲಿ ಎತ್ತುಗಳಿಗೆ ಮಹಿಳೆಯರು ತಮ್ಮ ಬಳಿ ಇರುವ ಬಂಗಾರದ ಒಡವೆ ಹಾಗೂ ಆಭರಣಗಳನ್ನು ತೊಡಿಸಿ ವಿಶೇಷವಾಗಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯ ಬಳಿಕ ಹಿಂದುತ್ವದ ಕಡೆಗೆ ವಾಲ್ತಾರಾ ದಳಪತಿ? ಏನಿದು ಮೈತ್ರಿ ಪಕ್ಷಗಳ ತಂತ್ರಗಾರಿಕೆ?
ರೈತಾಪಿ ವರ್ಗದವರು ತನ್ನ ಬೆನ್ನಲುಬಾದ ಎತ್ತುಗಳನ್ನು ಹಬ್ಬದ ದಿಗಳಲ್ಲಿ ಶೃಂಗಾರ ಮಾಡಿ ಮೆರವಣಿಗೆ ಮಾಡುತ್ತಾರೆ. ಆದರೆ ಇಲ್ಲಿ ದೀಪಾವಳಿ ಹಬ್ಬ ಬಂದರೆ ಸಾಕು, ಮನೆಯ ಹೆಣ್ಣು ಮಕ್ಕಳೆಲ್ಲ ಸೇರಿ ತಾವು ತೊಡುವ ಬಂಗಾರದ ಆಭರಣವನ್ನು ಎತ್ತುಗಳಿಗೆ ಹಾಕಿ ಸಂಭ್ರಮಿಸಿಸುತ್ತಾರೆ. ವರ್ಷವಿಡೀ ಭೂಮಿಯನ್ನು ಉಳುಮೆ, ಬಿತ್ತನೆ ಮಾಡುವ ಎತ್ತುಗಳಿಗೆ ದೀಪಾವಳಿ ಹಬ್ಬದಂದು ಕೆಲಸಕ್ಕೆ ವಿಶ್ರಾಂತಿ ನೀಡಿ ಹಬ್ಬದ ಸಡಗರಲ್ಲಿ ತೊಡಗಿಸಿಕೊಳ್ಳುತ್ತಾರೆ.


ನಮ್ಮ ಬಡತನ ನಮಗಿರಲಿ, ನಮ್ಮ ಬದುಕಿಗೆ ಆಧಾರವಾಗಿರುವ ಎತ್ತುಗಳಿಗೆ ಯಾವತ್ತೂ ಬಡತನ ಬಾರದಿರಲಿ. ನಮ್ಮ ತುತ್ತಿನ ಚಿಲವನ್ನು ತುಂಬಿಸಿಕೊಳ್ಳಲು ನೆರವಾಗುವ ಬಸವಣ್ಣನು ಸಂತೋಷದಿಂದ ಇರಲಿ ಎನ್ನುತ್ತಾ ಮಹಿಳೆಯರೆಲ್ಲ ಎತ್ತುಗಳಿಗೆ ಆರತಿ ಎತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಗ್ರಾಮದಲ್ಲಿರುವ ಸುಮಾರು 50ಕ್ಕೂ ಜೋಡು ಎತ್ತುಗಳನ್ನು ಗ್ರಾಮಸ್ಥರೆಲ್ಲರೂ ಸೇರಿ ಮೆರವಣಿಗೆ ಮಾಡುವ ಮೂಲಕ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಗ್ರಾಮದಲ್ಲಿ ಯಾರಿಗೂ ಯಾವುದೇ ರೀತಿಯ ಸಂಕಷ್ಟಗಳು ಬಾರದಿರಲಿ, ಎತ್ತುಗಳ ಹಾಗೂ ನಮ್ಮ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗದಿರಲಿ ಎಂದು ಭಾವನಾತ್ಮಕವಾಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ.
ಯರಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿ ಹಾಗೂ ಮಾಜಿ ಸದಸ್ಯರ ನೇತೃತ್ವದಲ್ಲಿ ಈ ರೈತರು ಆಚರಿಸುವ ಬಂಗಾರದ ದೀಪಾವಳಿಗೆ ಅಧ್ಯಕ್ಷ ಮಹಾದೇವ ಅವರು ಚಾಲನೆ ನೀಡಿದರು. ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ನುಗ್ಗಿಕೇರಿ ಗ್ರಾಮದಲ್ಲಿ ಗ್ರಾಮೀಣ ಶೈಲಿಯಲ್ಲಿಯೇ ಅದ್ದೂರಿಯಾಗಿ ಈ ಬಾರಿ ಬರಗಾಲದಲ್ಲಿಯೂ ಬಂಗಾರದ ದೀಪಾವಳಿ ಆಚರಿಸುವ ಮೂಲಕ ಅನ್ನದಾತ ಮನಸ್ಸು ಮಾಡಿದರೆ ಯಾವುದು ಅಸಾಧ್ಯವೆಂದು ಸಾಬೀತು ಪಡಿಸಿದ್ದಾರೆ.


ಮುಂಗಾರು ಕಳೆದು ಹಿಂಗಾರು ಬಿತ್ತನೆ ಮುಗಿಯುತ್ತಿದಂತೆ ದೀಪಾವಳಿ ಹಬ್ಬ ಬರುತ್ತದೆ. ಇದರಿಂದ ಜಾನುವಾರಗಳಿಗೆ ದೀಪಾವಳಿ ಹಬ್ಬಕ್ಕೂ ನಂಟಿದೆ. ಈ ದಿನದಂದು ಜಾನುವಾರಗಳನ್ನು ಶೃಂಗಾರ ಮಾಡಿ ರೈತರು ಸಂಸತ ಪಡುತ್ತಾರೆ. ಅಲ್ಲದೆ ಇದು ಹಿರಿಯರ ಕಾಲದಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದ್ದು, ಪೂರ್ವಜರ ಆಶಯದಂತೆ , ಈ ಪದ್ದತಿಯನ್ನು ಈಗಲೂ ಇಲ್ಲಿನ ರೈತರು ಹಾಗೂ ಜನಪ್ರತಿನಿಧಿಗಳು ಆಚರಣೆ ಮಾಡುತ್ತ ಬರುತ್ತಿದ್ದಾರೆ.
ಅಲ್ಲದೆ ರೈತರ ಈ ಕಾರ್ಯಕ್ಕೆ ಸಾಥ್ ನೀಡಿ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳೂ ಆಚರಣೆಯಲ್ಲಿ ಭಾಗಿಯಾಗಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಾರೆ. ಪ್ರತಿವರ್ಷವೂ ಸಹ ರೈತರು ಈ ವಿನೂತನ ಪದ್ದತಿ ಪಾಲನೆ ಮಾಡುತ್ತ ಬಂದಿದ್ದಾರೆ. ಇದರಿಂದ ನಮಗೆಲ್ಲ ಒಳ್ಳೆಯಾಗುತ್ತದೆ ಎಂದು ಇಲ್ಲಿನ ರೈತರು ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.