ಚಾಮರಾಜನಗರ : ತಮಿಳುನಾಡಿಗೆ ಮತ್ತೆ ಹದಿನೈದು ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶದ ವಿರುದ್ಧ ಗಡಿ ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಜೋರಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶಗೊಂಡಿರುವ ಕನ್ನಡಪರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು ಇಂದು ಮತ್ತೆ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಇದನ್ನೂ ಓದಿ : ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ವಕ್ತಾರೆಗೆ ಸಂಕಷ್ಟ
ಇಂದು ರೈತ ಸಂಘಟನೆಗಳು ತಮಿಳುನಾಡು ಹಾಗೂ ಕರ್ನಾಟಕದ ಗಡಿ ಪ್ರದೇಶ ಪುಣಜನೂರು ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಸ್ತೆ ಮೇಲೆ ಮಲಗಿ ಪ್ರತಿಭಟನೆ ನಡೆಸಿ ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು, ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಬೇಕೆಂಬ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.


ಜಲಾಶಯಗಳಲ್ಲಿ ಕುಡಿಯುವ ನೀರನ್ನು ಮಾತ್ರ ಇಟ್ಟುಕೊಂಡಿದ್ದೆವೆ, ಇಂತಹ ಸಂದರ್ಭದಲ್ಲಿ ಕಾವೇರಿ ಮೇಲುಸ್ತುವಾರಿಯಾಗಿರುವ ನೀರು ನಿರ್ವಹಣಾ ಮಂಡಳಿ ಏಕಪಕ್ಷೀಯ ತೀರ್ಮಾನ ಕೊಡುತ್ತಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ನಿಲುವು ತೆಗೆದುಕೊಳ್ಳಬೇಕು, ತಮಿಳುನಾಡಿಗೆ 5 ಲೀಟರ್ ಸಹ ನೀರು ಕೊಡುವುದಿಲ್ಲ ಎಂದು ಸರ್ಕಾರ ತಿಳಿಸಬೇಕೆಂದು ಆಕ್ರೋಶಿತರಾದರು.
ನಾವು ಆ ಎಲ್ಲ ಒತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಗಡಿಯನ್ನು ಬಂದ್ ಮಾಡಿದ್ದೆವೆ, ಈ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆಯಬಾರದು, ಇಲ್ಲವಾದರೆ ಕರ್ನಾಟಕದಲ್ಲಿರುವ ತಮಿಳರನ್ನು ವಾಪಸ್ ಕರೆಸಿಕೊಳ್ಳಲಿ. ರಾಜ್ಯದಲ್ಲಿ ತಮಿಳು ಚಲನಚಿತ್ರಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ನಮ್ಮ ನೀರು ಪಡೆದುಕೊಂಡು ನಮ್ಮ ಮೇಲೆ ಸವಾರಿ ಮಾಡೋಕೆ ಬಂದರೆ ನಾವು ಸಹಿಸುವುದಿಲ್ಲ, ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಕೇಳುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಚುನಾಯಿತ ಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದ್ದೇನು..?
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ರಾಜ್ಯ ಸರ್ಕಾರಕ್ಕೆ ಕಳೆದ ಮಂಗಳವಾರ ಸೂಚನೆ ನೀಡಿತ್ತು.
ಸಮಿತಿಯ ಸೂಚನೆ ಹೊರಬೀಳುತ್ತಿದ್ದಂತೆಯೇ ರೈತಸಂಘ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.