ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳ್ತಾ ಇದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ, ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಈ ಬಾರಿ ಇಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಲೇಬೇಕೆಂದು ಭರ್ಜರಿ ಪ್ರಚಾರ ಮಾಡಿದ್ದಾರೆ.
ಪ್ರತಿಷ್ಠಿತ ಕಣವೆಂದೇ ಪರಿಗಣಿಸಲ್ಪಟ್ಟಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆರ್ ಆರ್ ನಗರದಲ್ಲಿ ವಿಜಯದ ನಗೆ ಯಾರು ಬೀರಲಿದ್ದಾರೆ ಅನ್ನೋದು ಕುತೂಹಲತರಿಸಿದೆ.
ಈ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಕಾಂಗ್ರೆಸ್ ಕುಸುಮಾರನ್ನು ಕಣಕ್ಕಿಳಿಸಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಈ ಚುನಾವಣೆಯನ್ನು ಪ್ರತಿಷ್ಠೆಯ ಕದನವನ್ನಾಗಿ ತೆಗೆದುಕೊಂಡಿದ್ದು, ಪಕ್ಷ ತೊರೆದು ಸಮ್ಮಿಶ್ರ ಸರ್ಕಾರ ಪತನಕ್ಕೆ ಪಾತ್ರವಾಗಿರುವ ಮುನಿರತ್ನಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಲಗ್ಗೆರೆ, ಮತ್ತಿಕೆರೆ, ಜೆಪಿ ಪಾರ್ಕ್, ಯಶವಂತಪುರ, ಲಕ್ಷ್ಮೀದೇವಿ ನಗರ, ಪೀಣ್ಯ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರವನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಕಾರ್ಮಿಕರೇ ಹೆಚ್ಚಿನ ಮತದಾರರಾಗಿದ್ದಾರೆ. ಸ್ಲಮ್‌ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು ತೆಲುಗು, ತಮಿಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 4,78,300 ಮತದಾರರನ್ನು ಹೊಂದಿದ್ದು, ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾ ಹನುಮಂತರಾಯಪ್ಪ ಸ್ಪರ್ಧೆ ಮಾಡಿದ್ದು, ಜನಾಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿದ್ದು, ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಬಾರಿ ಗೆಲುವು ಸಾಧಿಸಿವೆ. ಕ್ಷೇತ್ರದಲ್ಲಿ ಜೆಡಿಎಸ್ ಈವರೆಗೆ ಖಾತೆ ತೆರೆದಿಲ್ಲ. ಹೀಗಾಗಿ ಆರ್ ಆರ್ ನಗರದಲ್ಲಿ ಲುವಿನ ನಗೆ ಯಾರು ಬೀರಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ.