Monday, December 4, 2023
spot_img
- Advertisement -spot_img

ಪ್ರಾದೇಶಿಕ ಪಕ್ಷಕ್ಕಾಗಿ ಉಸಿರಿರೋವರೆಗೂ ಹೋರಾಡುತ್ತೇನೆ : ಹೆಚ್‌.ಡಿ.ದೇವೇಗೌಡ

ಹಾಸನ : ಕಾಂಗ್ರೆಸ್‌ನ ಈ ಗ್ಯಾರಂಟಿ ಯೋಜನೆಗಳು ಇನ್ನೆಷ್ಟು ವರ್ಷ ಇರುತ್ತದೆ ನೋಡೋಣ, ನಿಮ್ಮದೇ ಸರಕಾರವಿದೆ ತನಿಖೆ ಮಾಡಿಸಿ ಬೇಡ ಅಂದೋರು ಯಾರು ? ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಿಡಿಕಾರಿದರು.

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಹಾಸನಕ್ಕೆ ನಾನು ಆಗಾಗ್ಗೆ ಬರ್ತಿತ್ತೇನೆ, ಕೆಲವು ಆಯ್ದ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡುತ್ತೇನೆ. ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಪ್ರವಾಸ ಮಾಡ್ತಾ ಇದ್ದಾರೆ. ಈಗಾಗಲೇ ಎರಡು ಕಾರ್ಯಕ್ರಮ ಘೋಷಿಸಿದ್ದು, ನಮ್ಮ ಒಬ್ಬ ಕಾರ್ಯಕರ್ತನು ಪಕ್ಷ ಬಿಡಲು ಅವಕಾಶ ಇಲ್ಲ. ನನ್ನ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಡುತ್ತಿದ್ದೇನೆ. ನಲ್ವತ್ತು ವರ್ಷದಿಂದ ಪ್ರಾದೇಶಿಕ ಪಕ್ಷ ಉಳಿಸಲು ಹೋರಾಡುತ್ತಿದ್ದೇನೆ, ನನಗೆ ಎಲ್ಲಿವರೆಗೂ ಕೈಕಾಲು ಆಡುತ್ತೋ ಅಲ್ಲಿಯವರೆಗೆ, ಕೊನೆ ಉಸಿರಿರೋವರೆಗೆ ಪಕ್ಷಕ್ಕಾಗಿ ಹೋರಾಡುತ್ತೇನೆ ಎಂದರು.

ಇದನ್ನೂ ಓದಿ; ‘ಮಾಜಿ ಸಚಿವರು ನಿಗಮ ಮಂಡಳಿಗೆ ಬೇಡಿಕೆ ಇಡಬಾರದು; ಕಾರ್ಯಕರ್ತರಿಗೆ ಆದ್ಯತೆ ಕೊಡಬೇಕು’

ಇಂಡಿಯಾದಲ್ಲಿ ಕೆಲ ಸ್ನೇಹಿತರಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಪದಗ್ರಹಣಕ್ಕೆ ಹಲವಾರು ನಾಯಕರು ಬಂದಿದ್ರು. ಆದ್ರೆ ಈಗ ಸರ್ಕಾರ ಬೇರೆ, ಈಗಿನ ಸರ್ಕಾರದ ಉದ್ದೇಶವು ಅವರಿಗೆ ಗೊತ್ತಿದೆ. ಆದ್ದರಿಂದ ಇದರ ಉದ್ದೇಶದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ನಾನು ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಮಾಧ್ಯಮದ ಸುದ್ದಿಗಳನ್ನ ನೋಡಿದ್ರೆ ಮೂರು ಬಾರಿ ಇಂಡಿಯಾದವರು ಮೀಟಿಂಗ್ ಮಾಡಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಇರಲಿ, ಇಪ್ಪತ್ತೆಂಟು ಪಾರ್ಟಿಗಳು ಸೇರಿ ಮೋದಿ, ಬಿಜೆಪಿಗೆ ಸೆಡ್ಡು ಹೊಡೆಯಲು ಹೊರಟಿದ್ದಾರೆ. ಸೆಪ್ಟೆಂಬರ್ ಒಳಗೆ ಒನ್ ಟು ಒನ್ ಕ್ಯಾಂಡಿಡೇಟ್ ಮಾಡುತ್ತೇವೆ ಎಂದಿದ್ದರು. ಜೆಡಿಎಸ್ ವಿಷಯದಲ್ಲಿ ಮಾತಾಡೋದಾದ್ರೆ ಈ ನಿಮಿಷದವರೆಗೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನನ್ನ ಗುರುತು ಮಾಡಿಲ್ಲ ನಾನು ಯಾರನ್ನೂ ಟೀಕಿಸಲು ಮಾತನಾಡಲ್ಲ ಎಂದು ಆಕ್ರೋಶಿಸಿದರು.

ಸಿಎಂ ಸಿದ್ದರಾಮಯ್ಯ ಗೃಹ ಲಕ್ಷ್ಮಿ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೆ ಎರಡು ಸಾವಿರ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಚಾಮುಂಡಿನು ಹೆಣ್ಣು ದೇವತೆ, ಆ ತಾಯಿಗೂ ಎರಡು ಸಾವಿರ ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆ ಪ್ರಾರಂಭಕ್ಕೆ ಮೊದಲು ಚಾಮುಂಡಿಗೆ ಎರಡು ಸಾವಿರ ನೀಡಿದ್ದಾರೆ. ಅವರು ಹುಂಡಿಗೆ ಹಣ ಹಾಕಲಿಲ್ಲ. ಆ ತಾಯಿಗೆ ಹಣ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ, ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ನೋಡೋಣ, ಮೂರು ನಾಲ್ಕು ತಿಂಗಳಲ್ಲೇ ಅದರ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದರು.

ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ದೊಡ್ಡಗೌಡರು, ಕಳೆದ ಮೂರು ತಿಂಗಳಿಂದ ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಮಟೆ ಹೊಡೆದ್ರು. ಆದರೇ ಈಗ ಮಾಡಬೇಡಿ ಅಂತ ಹಿಡ್ಕೊಂಡಿರೋರು ಯಾರು? ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡುತ್ತೇವೆ ಅಂದ್ರಿ ಬೇಡ ಅಂದಿದ್ಯಾರು ಎಂದು ಗುಡುಗಿದರು.

ಬಿಬಿಎಂಪಿಗೆ ಎರಡು ಬಾರಿ ಕಾಂಗ್ರೆಸ್ ಗೆ ಬೆಂಬಲ ಕೊಟ್ಟು ಎಷ್ಟು ಅಕ್ರಮ ನಡೆದಿದೆ, ತನಿಖೆ ಮಾಡ್ತಿವಿ ಅಂದ್ರಿ ಈಗ ನಿಮ್ಮದೇ ಅಧಿಕಾರ ಇದೆ, ಯಾಕೆ ತನಿಖೆ ಮಾಡ್ಲಿಲ್ಲ. ನಾನು ಇಷ್ಟು ವರ್ಷ ಹೋರಾಟ ಮಾಡಿದ್ದೇವೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles