ಹಾವೇರಿ : ಜಿಲ್ಲೆಯ ಸಾತೇನಹಳ್ಳಿ ಆಲದಕಟ್ಟಿಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ಘಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಸ್ಥಳಕ್ಕೆ ತೆರಳಿದ ಮಾಜಿ ಸಿಎಂ ಬೊಮ್ಮಾಯಿ ಘಟನೆ ಬಗ್ಗೆ ಪೋಲಿಸ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗ್ನಿ ಅವಘಡದಲ್ಲಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ಪರಿಹಾರ ನೀಡಿದ್ದಾರೆ.
ಏನಾಗಿತ್ತು ಪಟಾಕಿ ಗೋದಾಮಿಗೆ…?
ಹಾವೇರಿ ಹೊರವಲಯದ ಬಳಿ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು. ಈ ಗೋಡೌನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಕಳೆದ ಆಗಸ್ಟ್ 29ರಂದು ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು.
ಇದನ್ನೂ ಓದಿ : ʼದೇಶದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಒಳ್ಳೆಯದುʼ
ಘಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರು ಹಲವರು ಗಾಯಗೊಂಡಿದ್ದರು. ದುರಂತದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷಾದ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದರು. ಇದೇ ಘಟನೆಯ ಸಂಪೂರ್ಣ ತನಿಖೆಗೆ ಬೊಮ್ಮಾಯಿ ಸರ್ಕಾರವನ್ನು ಆಗ್ರಹಿಸಿದ್ದರು.
ಇನ್ನು ಪಟಾಕಿ ಇಟ್ಟಿದ್ದ ಗೋದಾಮಿನ ಬಳಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು. ಈ ವೆಲ್ಡಿಂಗ್ ಬೆಂಕಿ ಕಿಡಿ ಸಿಡಿದು ಪಟಾಕಿಗೆ ತಗುಲಿದ್ದರಿಂದ ಬೆಂಕಿ ಹತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಪಟಾಕಿ ಅವಘಡ ಸ್ಥಳಕ್ಕೆ ಉಪಸಭಾಧ್ಯಕ್ಷ ರುದ್ರಪ್ಪಾ ಲಮ್ಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಂತರ ಮಾತನಾಡಿದ್ದ ಅವರು, ನನಗೆ ನಾಲ್ಕು ಗಂಟೆಗೆ ಈ ವಿಷಯ ಗೊತ್ತಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದೇನೆ. ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.