ಬೆಂಗಳೂರು: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದು, ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ‘2021, ಜೂನ್‌ನಲ್ಲಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ತಮಿಳುನಾಡು, ಕರ್ನಾಟಕದ ಜನ ಅಣ್ಣ ತಮ್ಮಂದಿರದ್ದಂತೆ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಹೋಗಬೇಕು ಅಂದಿದ್ರು. ನಾನು ಅದನ್ನೇ ಪಾಲನೆ ಮಾಡಿಕೊಂಡು ಹೋಗ್ತಾ ಇದ್ದೀನಿ’ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ‘ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚನೆ ಮಾಡುವುದಾಗಿ ಹೇಳಿದೆ. ತಮಿಳುನಾಡಿನವರು ನೀರು ಬಿಡಬೇಕು ಎಂದು ಕೇಳಿದ್ದರು. ಅವರು ಹೇಳಿದ್ದಷ್ಟು ನೀರು ಬಿಡಲು ಆಗಲಿಲ್ಲ; ವಿರೋಧ ಪಕ್ಷದವರು ಏನೇನೋ ಮಾತಾಡ್ತಾರೆ ನೋಡೋಣ. ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠ ರಚನೆ ಮಾಡುವುದಾಗಿ ಹೇಳಿದ್ದಾರೆ’ ಎಂದರು.
ಇದನ್ನೂ ಓದಿ; ಕಾವೇರಿ ನದಿನೀರು ಹಂಚಿಕೆ ವಿವಾದ; ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಒಪ್ಪಿಗೆ
‘ನಮ್ಮ ರಾಜ್ಯಕ್ಕೆ 124 ಟಿಎಂಸಿ ನೀರು ಬೇಕು; ಸದ್ಯಕ್ಕೆ ನಮ್ಮಲ್ಲಿ 55 ಟಿಎಂಸಿ ಇದೆ. ಕೆ.ಆರ್.ಎಸ್ ನಲ್ಲಿ 22 ಡಿಎಂಸಿ, ಕಬಿನಿಯಲ್ಲಿ 6.6 ಟಿಎಂಸಿ, ಹಾರಂಗಿಯಲ್ಲಿ 7 ಟಿಎಂಸಿ ನೀರು ಇದೆ. 2021ರ ಜೂನ್ ನಲ್ಲಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ತಮಿಳುನಾಡು, ಕರ್ನಾಟಕದ ಜನ ಅಣ್ಣ ತಮ್ಮಂದಿರದ್ದಂತೆ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಹೋಗಬೇಕು ಅಂದಿದ್ರು. ಅದನ್ನೇ ನಾನು ಪಾಲನೆ ಮಾಡಿಕೊಂಡು ಹೋಗ್ತಾ ಇದ್ದೀನಿ’ ಎಂದು ಟಕ್ಕರ್ ಕೊಟ್ಟರು.
‘ಕಾವೇರಿ ನೀರು ಹಂಚಿಕೆ ಸಂಬಂಧ ಬುಧವಾರ ಸರ್ವಪಕ್ಷ ಸಭೆ ಕರೆದಿದ್ದೇವೆ. ಮಾಜಿ ಸಿಎಂಗಳು, ಎರಡು ಸದನಗಳ ಸಭಾ ನಾಯಕರು, ಪ್ರಮುಖ ನಾಯಕರಿಗೂ ಆಹ್ವಾನ ಕೊಟ್ಟಿದ್ದೇವೆ. ಅಂದು ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ’ ಎಂದರು.
ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರ ಹಿತಕ್ಕಾಗಿ ನಾನು ಅವರಿಗೆ ಉತ್ತರ ಕೊಡಬೇಕು; ಬಿಜೆಪಿ, ಜೆಡಿಎಸ್ ಪಕ್ಷದವರಿಗೆ ನಾನು ಉತ್ತರ ಕೊಡಲು ರೆಡಿ ಇಲ್ಲ. ಟೀಕೆ ಮಾಡ್ತಾರೆ ಅಂತ ಉತ್ತರ ಕೊಟ್ಕೊಂಡು ಕೂರಲು ಆಗಲ್ಲ; ಅವರು ಮಾತಾಡಿದ್ರು ಅಂತ ನಾನು ಮಾತಾಡೋಕೆ ಆಗುತ್ತಾ? ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಿಚಾರವಾಗಿ ಸರ್ವ ಪಕ್ಷ ಸಭೆಯಲ್ಲಿ ಮಾತಾಡ್ತೀವಿ’ ಎಂದು ಹೇಳಿದರು.
ಇದನ್ನೂ ಓದಿ; ಡಿಎಂಕೆ ಮೆಚ್ಚಿಸಲು ರಾಜ್ಯದ ಹಿತ ಬಲಿ ಕೊಡುತ್ತಿರುವ ಕಾಂಗ್ರೆಸ್: ಬಿಜೆಪಿ ವಾಗ್ದಾಳಿ
‘ನನ್ನ ಕಾಲದಲ್ಲಿ ನಾನು ಏನು ಮಾಡಿದ್ದೆ ಅಂತ ಟೀಕೆ ಮಾಡುವವರು ನೋಡ್ಕೋಬೇಕು. ಕುಮಾರಣ್ಣ ಆಗ ಎಂಪಿ ಇದ್ರಲಾ.. ಹೇ ಕ್ಷಮಿಸಿ.. ಕುಮಾರಸ್ವಾಮಿ. ಅವರು ಏನು ಮಾಡಿದ್ರು ಅಂತ ತಿಳಿದುಕೊಳ್ಳಬೇಕು. ಜನರಿಗೂ ಎಲ್ಲ ಗೊತ್ತಿದೆ, ಕೆಲವರು ರಾಜಕಾರಣ ಮಾಡಬೇಕು ಮಾಡ್ತಾ ಇದ್ದಾರೆ ಅಷ್ಟೆ. ರೈತರಿಗರ ಅನುಕೂಲ ಆಗುವಂತ ಕೆಲಸ ಮಾಡಿದ್ದೇವೆ. ಚೆಲುವರಾಯಸ್ವಾಮಿ ಹಾಗೂ ಇತರರು ನನ್ನ ಮೇಲೆ ಒತ್ತಡ ಹಾಕಿ ರೈತರಿಗೆ ನೀರು ಕೊಡಿಸಿದ್ದಾರೆ. ಇರೋದು 55 ಟಿಎಂಸಿ, ಬೇಕಾಗಿರೋದು 124 ಟಿಎಂಸಿ. ಕಾನೂನಿನ ಪ್ರಕಾರ 177.25 ಟಿಎಂಸಿ ನೀರು ತಮಿಳುನಾಡಿಗೆ ಕೊಡಬೇಕಿದೆ. ಈಗ 35 ಟಿಎಂಸಿ ಕೇಳ್ತಾ ಇದ್ದಾರೆ’ ಎಂದು ಮಾಹಿತಿ ನೀಡಿದರು.
‘ನಾವು ತಮಿಳುನಾಡಿಗೆ ಹೆಚ್ಚಿಗೆ ನೀರು ಬಿಟ್ಟಿಲ್ಲ, ಆಗಸ್ಟ್ 31ರ ತನಕ ನೀರು ಬಿಡಿ ಎಂದು ಕೇಳಿದ್ರು. ನಾವು ನೀರು ಬಿಡಲು ಆಗಲ್ಲ ಅಂತ ಹೇಳಿದ್ದೇವೆ. ಬಿಜೆಪಿಯವರು ಮಾತನಾಡಿದ್ದಕ್ಕೆಲ್ಲ ನಾನು ಮಾತಾಡಲ್ಲ. ನಮ್ಮ ರಾಜ್ಯ, ರಾಜ್ಯದ ಜನರ ಹಿತ ಕಾಪಾಡಬೇಕು ಅಷ್ಟೇ’ ಎಂದರು.
ಕುಮಾರಸ್ವಾಮಿ ಅವರನ್ನು ತಡೆದಿರೋದು ಯಾರು?
ಕುಮಾರಸ್ವಾಮಿ ಅವರ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿ, ‘ದಾಖಲೆ ಬಿಡುಗಡೆ ಮಾಡಬೇಡಿ ಎಂದು ಕುಮಾರಸ್ವಾಮಿ ಅವರನ್ನು ತಡೆದಿರೋದು ಯಾರು? ಬೇಕಿದ್ದರೆ ತನಿಖೆ ಮಾಡಿಸಲಿ, ಬೇಡ ಅಂದಿದ್ದು ಯಾರು? ಈ ಆರೋಪದಿಂದ ಯಾರಿಗೆ ಏನು ಅನುಕೂಲ ಆಗ್ತಿದೆ ನನಗೆ ಗೊತ್ತಿಲ್ಲ. ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸ್ತಾರೆ. ಸುದ್ದಿಯಲ್ಲಿ ಇರುವುದಕ್ಕಾಗಿ ಹೀಗೆ ಮಾಡ್ತಾ ಇದ್ದಾರೆ ಅಷ್ಟೆ; ಬಿಚ್ತೀವಿ ಅಂತಾರೆ, ಬಿಡುಗಡೆ ಮಾಡ್ತೀವಿ ಅಂತಾರೆ ಮಾಡಲಿ. ಅವರಲ್ಲೇ ಮಾಡಬೇಡ ಅನ್ನೋವ್ರು ಇದ್ದಾರೆ’ ಎಂದು ಲೇವಡಿ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.