Sunday, September 24, 2023
spot_img
- Advertisement -spot_img

‘ಬಿಜೆಪಿ ಕಚೇರಿ ಇರೋದು ಪಕ್ಷ ಸಂಘಟನೆಗೆ; ಅಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು’

ಬೆಂಗಳೂರು: ಬಿಜೆಪಿ ಕಚೇರಿ ಇರೋದು ಪಕ್ಷ ಸಂಘಟನೆಗೆ; ಅಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ‘ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ’ ಎಂಬ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಕಚೇರಿ ಇರುವುದು ಪಕ್ಷ ಸಂಘಟನೆಗೆ, ಗಾಸಿಪ್‌ಗಳೆಲ್ಲಾ ಮನೆಗಳಲ್ಲಿ ಆಗಬೇಕು. ಗಾಸಿಪ್‌ಗೆ ಅಂತನೇ ಬೇರೆ ಬೇರೆ ಮನೆಗಳಿವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗ್ತಾವೆ; ಅಲ್ಯಾಕೆ ಹೋಗಿ ಗಾಸಿಪ್ ಬಿಡಬೇಕು’ ಎಂದು ಟಾಂಗ್ ನೀಡಿದ್ದಾರೆ.

‘ಕೆಲವು ಜನ ಪಾರ್ಟಿ ಬಿಡ್ತೀವಿ ಅಂತ ಬೆದರಿಕೆ ಹಾಕೋದು ಸರಿಯಲ್ಲ, ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೀವಿ. ಕರ್ನಾಟಕದಲ್ಲಿ ಬಿಜೆಪಿ ಮುಗಿದೋಯ್ತಾ..? ಪ್ರಿಯಾಂಕ್ ಖರ್ಗೆ ಬಿಜೆಪಿ ಕಥೆ ಮುಗಿದೋಯ್ತು ಅಂತಾರೆ. ಇದು ಎಷ್ಟು ಬಾಲಿಷ ಹೇಳಿಕೆ ಅಂದ್ರೆ, ಜಗತ್ತಿನಲ್ಲೇ ಬಿಜೆಪಿ ಅತಿ ದೊಡ್ಡ ಪಾರ್ಟಿ. ಮೋದಿಯಂತವರು ಪಕ್ಷದಲ್ಲಿ ಇದ್ದಾಗಲೂ ಹೀಗೆ ಹೇಳೋದು ಕೆಳಮಟ್ಟದ ಹೇಳಿಕೆ. ಬಿಜೆಪಿ ಒಳಗೆ ಇದ್ದುಕೊಂಡು ಹೇಳಿಕೆ ಕೊಡೋದು ಸರಿಯಲ್ಲ’ ಎಂದರು.

ಇದನ್ನೂ ಓದಿ; ‘ಗೃಹಲಕ್ಷ್ಮಿ’ಯಲ್ಲಿ ನ್ಯೂನತೆ ಕಾಣ್ತಿಲ್ಲ; ದೊಡ್ಡವರು ಏನ್ ಬೇಕಾದ್ರೂ ಮಾತಾಡ್ಲಿ: ಸೋಮಶೇಖರ್

ರೇಣುಕಾಚಾರ್ಯ ಪಕ್ಷ ಬಿಡ್ತಾರೆ ಅನ್ನೋ ವಿಚಾರವಾಗಿ ಮಾತನಾಡಿ, ‘ಅವರು ಪಕ್ಷ ಬಿಡೋದಿಲ್ಲ; ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲ ಗಮನಿಸ್ತಾ ಇದೆ. ಒಳ್ಳೆದಿನ ಬರುತ್ತದೆ, ಗಡಿಬಿಡಿ ಯಾಕೆ? ಜನ ರೆಸ್ಟ್ ಕೊಟ್ಟಿದ್ದಾರೆ ಸ್ವಲ್ಪ ದಿನ ರೆಸ್ಟ್ ಮಾಡಲಿ. ಅವರು ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಎಂಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ, ಟಿಕೆಟ್ ಕೇಳಿದ್ದಾರೆ, ಅದರಲ್ಲಿ ತಪ್ಪೇನಿದೆ’ ಎಂದು ಹೇಳಿದರು.

‘ಹಾವೇರಿಯಲ್ಲಿ ಉದಾಸಿ ಅವರೂ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಸಹಜವಾಗಿ ಅವರು ಟಿಕೆಟ್ ಕೇಳಿದ್ದಾರೆ ತಪ್ಪೇನು? ಅವರಿಗೆ ಕೇಳುವ ಅಧಿಕಾರ, ಹಕ್ಕು ಎರಡೂ ಇದೆ. ಟಿಕೆಟ್ ಸಿಗುತ್ತೆ ಅಂದ್ರೆ ಹೋರಾಟ ಮಾಡಲಿ; ಎಂದರು.

‘ರಾಜ್ಯಾಧ್ಯಕ್ಷರು ಆದಷ್ಟು ಬೇಗ ಹುದ್ದೆಯಿಂದ ಮುಕ್ತರಾಗಬೇಕು ಅಂತಿದ್ದಾರೆ. ಆದರೆ, ಮೇಲಿನವರು ಅವರನ್ನ ಬಿಡ್ತಾ ಇಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗ್ತಿಲ್ಲ. ಪಾಪ ಅವರು ಒಳ್ಳೆಯ ಮನುಷ್ಯ; ಸೋತಾಗ ನೂರು ಮಂದಿ ಕಲ್ಲು ಹೊಗೀತಾರೆ. ಅದೇ ಗೆದ್ದಿದ್ರೆ ಅವರನ್ನೇ ಮುಂದುವರಿಸ್ತಾ ಇದ್ರು. ನಾನೇ ಸೋತಿದ್ರೂ ಮಾಧ್ಯಮದವರು ಅಂತೆ-ಗಿಂತೆ ಅಂತ ಸುದ್ದಿ ಮಾಡೋವ್ರು. ನಾನು ಈಗ ಗೆದ್ದಿದ್ದೇನೆ, ಹಾಗಾಗಿ ಸ್ವಲ್ಪ ಸುಮ್ನೆ ಇದ್ದಾರೆ ಅಷ್ಟೆ’ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles