ಮಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳು ಕಳೆಯುತ್ತಿದೆ. ಆರಂಭದಲ್ಲೇ ಈ ಸರ್ಕಾರ ತಪ್ಪು ಹೆಜ್ಜೆಗಳನ್ನು ಇಟ್ಟಿದೆ. ಅಧಿಕಾರ ಕೊಟ್ಟ ತಪ್ಪಿಗೆ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದೆ ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ವಿದ್ಯುತ್, ಅಬಕಾರಿ, ನೋಂದಣಿ ಶುಲ್ಕ ಸೇರಿದಂತೆ ಬಸ್ ದರ ಹೆಚ್ಚಳ ಆಗಿದೆ. ಇದರ ಜೊತೆಗೆ ಬರವೂ ನಮ್ಮನ್ನು ಕಾಡುತ್ತಿದೆ. ಕಾಕತಾಳೀಯಕ್ಕಿಂತ ಕಾಂಗ್ರೆಸ್ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಬರುತ್ತಿದೆ ಎಂದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈ ವಿಚಾರವನ್ನು ಮೂಢನಂಬಿಕೆ ಎನ್ನುವುದಿಲ್ಲ. ಇದು ಇವರ ಕಾಲ್ಗುಣ ಎನ್ನುವ ಸಂಶಯ ಕಾಡುತ್ತಿದೆ. ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಬರ ಪರಿಸ್ಥಿತಿ ಬಂದಿದೆ. ಇದರ ಜೊತೆಗೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ಸನಾತನ ಧರ್ಮದ ಬಗ್ಗೆ ಮಾತಾಡೋರು ನಾಶವಾಗುತ್ತಾರೆ : ಬಸನಗೌಡ ಪಾಟೀಲ ಯತ್ನಾಳ
ಹರಿಪ್ರಸಾದ್ ಹೂಬ್ಲೋಟ್ ವಾಚ್, ಪಂಚೆಯೊಳಗಿನ ಖಾಕಿ ಚೆಡ್ಡಿ ಎಂಬೆಲ್ಲ ಮಾತುಗಳನ್ನು ಸಿದ್ದರಾಮಯ್ಯರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಎಐಸಿಸಿ ಅವರಿಗೆ ನೋಟಿಸ್ ಕೂಡ ಕೊಟ್ಟಿದೆ. ಇದರ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ ಸಚಿವ ರಾಜಣ್ಣ ಮೂರು ಜನ ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಸರ್ಕಾರದಲ್ಲಿ ಅಪಸ್ವರ ಕೇಳಿಬರುತ್ತಿದೆ, ಮುಖ್ಯಮಂತ್ರಿ-ಡಿಸಿಎಂ ಚರ್ಚೆ ಜೋರಾಗಿದೆ ಎಂದು ಕುಟುಕಿದರು.
ಸಿದ್ದರಾಮಯ್ಯ ಮನುಸ್ಮೃತಿ ಹೇರಿಕೆ ಯತ್ನ ಆಗುತ್ತಿದೆ ಎನ್ನುತ್ತಾರೆ. ಶುಕ್ರವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಮನುಸ್ಮೃತಿ ಬಗ್ಗೆ ಅವರೇ ಮಾತನಾಡಿದ್ದಾರೆ. ಆದರೆ ಸಿದ್ದರಾಮಯ್ಯ ಒಂದು ವಿಚಾರ ತಿಳಿದುಕೊಳ್ಳಬೇಕು. ದೇಶದಲ್ಲಿ ಹಲವು ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಯಾವ ರಾಜರು ಮನುಸ್ಮೃತಿಯನ್ನು ಸಂವಿಧಾನವಾಗಿ ಬಳಸಿದ್ದಾರೆ?. ಯಾವ ರಾಜರೂ ಮನುಸ್ಮೃತಿಯನ್ನು ಸಂವಿಧಾನವಾಗಿ ಆಯ್ಕೆ ಮಾಡಿಕೊಂಡಿಲ್ಲ ಎಂದು ಕಿಡಿಕಾರಿದರು.
ಸದ್ಯ ಯಾವ ರಾಜ್ಯವೂ ಮನುಸ್ಮೃತಿಯನ್ನು ಆಡಳಿತದ ಭಾಗ ಮಾಡುತ್ತೇವೆ ಎಂದು ಹೇಳಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಈ ಹೇಳಿಕೆ ಕೊಟ್ಟಿದ್ದಾರೆ? ‘ಫ್ಯಾಕ್ಟ್ ಚೆಕ್’ ಮಾಡಬೇಕು ಅಂತ ಹೇಳಿದ್ದೀರಿ, ನಿಮ್ಮ ಹತ್ತಿರ ಯಾವ ಆಧಾರ ಇದೆ? ಮನುಸ್ಮೃತಿ ಹೇರಿಕೆ ವಿಚಾರದಲ್ಲಿ ಮತ್ತೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ, ಅವರದ್ದೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ‘ಕಾಂಗ್ರೆಸ್‌ನವರು ರಾಜ್ಯದ ರೈತರ ಹಿತ ಬಲಿ ಕೊಡುತ್ತಿದ್ದಾರೆ’
ಸಿದ್ದರಾಮಯ್ಯ ಅವರು ಸುಳ್ಳು ಸುದ್ದಿಗಳ ವಿರುದ್ದ ಸುಮೋಟೋ ಕೇಸ್ ದಾಖಲಿಸಲು ಸೂಚಿಸಿದ್ದಾರೆ. ಹೀಗಾಗಿ ಇವರ ಸುಳ್ಳು ಸುದ್ದಿ ವಿರುದ್ದ ಪೊಲೀಸ್ ಇಲಾಖೆ ಸುಮೋಟೋ ಕೇಸ್ ಹಾಕಲಿ. ಸಿಎಂ ಅವರು ತಮ್ಮ ಸುಳ್ಳಿನ ವಿರುದ್ದವೇ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಲಿ ಎಂದು ಸವಾಲು ಹಾಕಿದರು.
ಮಹಾತ್ಮ ಗಾಂಧೀಜಿ ಹತ್ಯೆಯನ್ನು ಆರ್‌ಎಸ್‌ಎಸ್ ಮೇಲೆ ಹೊರಿಸಿ ನಿರಂತರ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರದ ಒಬ್ಬ ಸಚಿವ ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಮಾಡಿದಾರೆ. ಪ್ರಕರಣ ಕೂಡ ದಾಖಲಾಗಿದೆ, ಅವರನ್ನು ಸಂಪುಟದಿಂದ ಕೈ ಬಿಟ್ಟು ತನಿಖೆ ನಡೆಸಲಿ. ಪ್ರಿಯಾಂಕ್ ಖರ್ಗೆ ಸದ್ಯ ಎಲ್ಲಾ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಸಿಎಂ ಸೇರಿ ಎಲ್ಲಾ ಖಾತೆಗಳನ್ನು ಖರ್ಗೆಯವರೇ ನೋಡೊಕೊಳ್ಳುತ್ತಿದ್ದಾರೆ. ಆದರೆ ಸುಧಾಕರ್ ವಿಚಾರದಲ್ಲಿ ಪ್ರಿಯಾಂಕ್ ತುಟಿ ಬಿಚ್ಚುತ್ತಿಲ್ಲ ಎಂದು ಕೆಂಡಾಮಂಡಲರಾದರು.
ವರ್ಗಾವಣೆ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ. ಕಪ್ಪ ಕಾಣಿಕೆ ಕೊಟ್ಟವರಿಗೆ ವರ್ಗಾವಣೆ ಮಾಡಿ ಜಾಗ ತೋರಿಸುತ್ತಿದ್ದಾರೆ. ಕಪ್ಪ ಕೊಡದವರಿಗೆ ಯಾವುದೇ ಜಾಗ ತೋರಿಸದೇ ವರ್ಗಾವಣೆ ಮಾಡುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬಗ್ಗೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ತಿದ್ದುಪಡಿ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ.ರವಿ ಆಕ್ರೋಶಗೊಂಡರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.