ಶಿವಮೊಗ್ಗ: ಸಿದ್ದರಾಮಯ್ಯ ಬಿಜೆಪಿ ಸೇರಲು ಪ್ರಯತ್ನಿಸಿದ್ದರು ಎಂಬ ದೇವೇಗೌಡರ ಹೇಳಿಕೆಗೆ ಉತ್ತರಿಸಿದ್ದ ಸಿಎಂ, ‘ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ’ ಎಂದಿದ್ದರು. ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ‘ನೀವು ಸಾಯೋದು ಬೇಡ, ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ’ ಎಂದು ತಿರುಗೇಟು ಕೊಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಈಶ್ವರಪ್ಪ, ‘ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ, ನನ್ನ ಆಸೆ ಅವರು ಬೇಗ ಸಾಯಬಾರದು; ಬಹಳ ವರ್ಷ ಬದುಕಿರಬೇಕು. ಜನರ ಪರವಾಗಿ, ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ ಬೇಡ ಅನ್ನಲ್ಲ. ಯಾವ ಕಾರಣಕ್ಕೂ ನೀವು ಸಾಯೋದು ಬೇಡ, ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ’ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ; ‘ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕ; ಮೈತ್ರಿ ಅನಿವಾರ್ಯ’
‘ಆದರೆ, ನೀವು (ಸಿದ್ದರಾಮಯ್ಯ) ಮೊದಲನೇ ಬಾರಿ ಸರ್ಕಾರಿ ಕಾರು ಹತ್ತಿದ್ದು ಬಿಜೆಪಿಯ ಬೆಂಬಲದಿಂದ. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ನೀವು ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ್ರಿ. ಬಿಜೆಪಿಯ 19 ಜನ ಎಂಎಲ್ಎ ಗಳು ಯಾವುದೇ ಷರತ್ತು ಇಲ್ಲದೆ ಆ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರು. ಕಾಂಗ್ರೆಸ್ಸೇತರ ಸರ್ಕಾರ ಕರ್ನಾಟಕದಲ್ಲಿ ಬರಬೇಕೆಂದು ಎಂದು ಬೆಂಬಲ ನೀಡಿದ್ದರು. ಆಗ ಭಾರತೀಯ ಜನತಾ ಪಾರ್ಟಿ ಕೋಮುವಾದಿ ಪಕ್ಷ ಅಂತ ಗೊತ್ತಾಗ್ಲಿಲ್ವಾ. ಸರ್ಕಾರಿ ಕಾರು ಹತ್ತಬೇಕಾದರೆ ಮಜಾ ಮಾತ್ರ ಬೇಕಿತ್ತಾ ನಿಮಗೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಬಿಜೆಪಿ ಬೆಂಬಲ ಪಡೆದ ಸಮಾಜವಾದಿಗೆ ಬಿಜೆಪಿ ಕೋಮುವಾದಿ ಅಂತ ಗೊತ್ತಾಗಿದ್ದು ಯಾವಾಗ? ಅಂದು ಕೋಮುವಾದಿ ಬಿಜೆಪಿ ಅಂತ ಗೊತ್ತಾಗದೆ ಇವತ್ತು ಮಾತ್ರ ಯಾಕೆ ಕೋಮುವಾದಿ ಅಂತ ಗೊತ್ತಾಗಿದೆ. ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ, ಮಜಾ ಮಾಡಲು ಸಮಾಜವಾದಿ. ರಾಷ್ಟ್ರವಾದಿಗಳ ಬಗ್ಗೆ ನಿಮಗೆ ಟೀಕೆ ಮಾಡಲು ಬಾಯಲ್ಲಿ ಏನು ಇಟ್ಕೊಂಡು ಟೀಕೆ ಮಾಡುತ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷೇಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.