ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿ ಕೇಳಿ ಬರುತ್ತಿರುವ ಮಧ್ಯೆಯೇ ಇದೀಗ ಬಿಜೆಪಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇಂದು ಡಿ.ಕೆ.ಶಿವಕುಮಾರ್ ಅವರನ್ನು ಗೃಹಕಚೇರಿಯಲ್ಲಿ ಭೇಟಿಯಾಗಿರುವ ರೇಣುಕಾಚಾರ್ಯ ಕೆಲಹೊತ್ತು ಚರ್ಚೆ ನಡೆಸಿ, ವಾಪಸ್ ಆಗಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಚಾರ್ಯ ಅವರೂ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.


ಇದನ್ನೂ ಓದಿ: ಪ್ರಧಾನಿ ಮೋದಿಗೆ ಗ್ರೀಸ್‌ನ ಪ್ರತಿಷ್ಠಿತ ಪ್ರಶಸ್ತಿ!
ಡಿಕೆಶಿ ಭೇಟಿ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಇಂದು ನಾನು ಸಿಎಂ, ಡಿಸಿಎಂ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಮಳೆ ಇಲ್ಲ. ಈ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಮನವಿ ಮಾಡಿದ್ದೇನೆ ಎಂದರು.
ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಈ ತಾಲ್ಲೂಕಿನ ಜನರು ರಾಜಕೀಯ ಭವಿಷ್ಯ ನೀಡಿದ್ದಾರೆ. ಹಾಗಾಗಿ ಜನರ ಪರವಾಗಿ ಮನವಿ ಮಾಡಿದ್ದೇನೆ. ನಾನು ಕಾಂಗ್ರೆಸ್ ಸೇರುವ ವಿಚಾರವಾಗಿ ಭೇಟಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಜೊತೆ ಸ್ನೇಹ ವಿಶ್ವಾಸ ಬಹಳ ದಿನಗಳಿಂದ ಇದೆ ಎಂದರು.
ಕಾಂಗ್ರೆಸ್ ಸೇರಲು ಯಾರೂ ಆಫರ್ ಕೊಟ್ಟಿಲ್ಲ: ನಾನು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಇದುವರೆಗೂ ಕೇಳಿಲ್ಲ. ಯಾರು ಬಿಜೆಪಿ ಬಿಡ್ತಾರೋ ನನಗೆ ಗೊತ್ತಿಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ, ಕಾಂಗ್ರೆಸ್ ಸೇರುವಂತೆ ಯಾರೂ ಆಫರ್ ಕೊಟ್ಟಿಲ್ಲ ಎಂದೂ ರೇಣುಕಾಚಾರ್ಯ ಹೇಳಿದರು.
ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ: ಲೋಕಸಭೆ ಚುನಾವಣೆ ಸ್ಪರ್ಧೆಯ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ಎಂ.ಪಿ.ರೇಣುಕಾಚಾರ್ಯ, ನಾನು ಕೂಡ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಬಿಜೆಪಿ ಪಕ್ಷದ ಹಿರಿಯರಿಗೆ ತಿಳಿಸಿದ್ದೇನೆ. ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಎನ್ನುವುದನ್ನು ನೋಡಬೇಕು. ನಾನು ಒಂದು ಕ್ಷೇತ್ರದಲ್ಲಿ ಸೋತಿದ್ದರೂ ಕೆಲಸ ಮಾಡಿದ್ದೇನೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.