ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಸದ್ದು ಜೋರಾಗಿ ಕೇಳಿ ಬರುತ್ತಿರುವ ನಡುವೆಯೇ ಇದೀಗ ಬಿಜೆಪಿಯ ಮಾಜಿ ಶಾಸಕಿಯೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ಬಲಗೊಂಡಿದೆ.
ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದು, ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಕೆ.ಆರ್.ಪುರದ ದೇವಸಂದ್ರನಲ್ಲಿರುವ ಪೂರ್ಣಿಮಾ ಅವರ ನಿವಾಸದಲ್ಲಿ ಇಂದು ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಫೋಟೋಗಳು ವೈರಲ್ ಕೂಡ ಆಗಿದ್ದು, ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಪೂರ್ಣಿಮಾ ಅವರ ತಂದೆ ದಿವಂಗತ ಕೃಷ್ಣಪ್ಪ ಅವರು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಹಾಗಾಗಿ ಪೂರ್ಣಿಮಾ ಅವರೂ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಎತ್ತಿನಹೊಳೆ ಕಾಮಗಾರಿ ಪ್ರಗತಿ ಸಮಾಧಾನ ತಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ಣಿಮಾ ಶ್ರೀನಿವಾಸ್, ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಇದ್ದೇ ಇದೆ. ಆದರೆ ನಾನು ಬಿಜೆಪಿಯಲ್ಲಿ ನೆಲೆ ಕಂಡಿದ್ದೇನೆ. ಸದ್ಯಕ್ಕೆ ಕಾಂಗ್ರೆಸ್ ಸೇರುವ ನಿರ್ಧಾರ ಇಲ್ಲ. ಹಾಗೇನಾದರೂ ಕಾಂಗ್ರೆಸ್‌ಗೆ ಹೋಗುವುದಾದರೆ ಖಂಡಿತವಾಗಿಯೂ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನವು ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು. ಇದರಿಂದ ಬೇಸರಗೊಂಡಿರುವ ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.