ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರ ಇನ್ನೂ ಬಿಸಿಯಾಗಿರುವಾಗಲೇ ಬಿಜೆಪಿ ಮಾಜಿ ಶಾಸಕರಾದ ಬಿಸಿ ಪಾಟೀಲ್ ಹಾಗೂ ನರಸಿಂಹ ನಾಯಕ ರಾಜುಗೌಡ ಇಬ್ಬರೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಜತೆಗೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಹುಭಾಷಾ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಲವರು ಪಾಲ್ಗೊಂಡಿದ್ದರು. ಚಿತ್ರರಂಗ ಸೇರಿದಂತೆ ರಾಜಕೀಯ ಮುಖಡರೂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಬಿಸಿ ಪಾಟೀಲ್ ಹಾಗೂ ರಾಜುಗೌಡ ಜತೆಗೆ ಅವರು ಗುಪ್ತ ಮಾತುಕತೆ ನಡೆಸಿರುವುದು ಆಪರೇಷನ್ ಹಸ್ತದ ಗುಮಾನಿ ಉಂಟುಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಟಾರ್ಗೆಟ್ ಇಟ್ಟುಕೊಂಡಿರುವ ಡಿಕೆಶಿ, ಬಾಂಬೆ ಟೀಂ ಹಾಗೂ ಬಿಜೆಪಿಯ ಅತೃತಪ್ತ ಹಾಲಿ ಮತ್ತು ಮಾಜಿ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ನೋಟಿಸ್ ಕೊಟ್ಟರೂ ಕೇರ್ ಮಾಡ್ತಿಲ್ಲ ಹೊನ್ನಾಳಿ ಮಾಜಿ ಶಾಸಕ; ಬಿಜೆಪಿಗೆ ಬಿಸಿ ತುಪ್ಪವಾದ ಎಂಪಿಆರ್!
ರಾಜಕೀಯ ವಲಯದಲ್ಲಿ ಆಪರೇಷನ್ ಹಸ್ತದ ಗುಸುಗುಸು ಜೋರಾಗಿರುವ ಸಂದರ್ಭದಲ್ಲೇ ಡಿಕೆಶಿ, ಬಿಸಿ ಪಾಟೀಲ್ ಹಾಗೂ ರಾಜುಗೌಡ ಗುಪ್ತ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರಿಗೂ ಡಿಕೆಶಿ ಗಾಳ ಹಾಕಿದ್ರಾ ಎಂಬ ಮಾತುಗಳು ಕೆಳಿಬರುತ್ತಿವೆ. ಸುದೀಪ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಡಿಕೆಶಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಇಬ್ಬರ ಜತೆ ಮಾತುಕತೆ ನಡೆಸಿದ್ದಾರೆ. ಹಾವೇರಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಬಿಸಿ ಪಾಟೀಲ್, ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಪಕ್ಷದಲ್ಲೇ ಉಳಿಯುವ ಸಾಧ್ಯತೆ ಇದೆ, ಇಲ್ಲದಿದ್ದರೆ ಮಾತೃ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.