ಬೆಂಗಳೂರು : ಕಾವೇರಿ ನೀರಿನ ವಿಚಾರದಲ್ಲಿ ನಾವಿದ್ದಾಗಲೂ ಈ ರೀತಿಯ ತೀರ್ಪು ಬಂದಿದೆ. ಆದರೆ ಅನಿಸಿಕೆ ತಿಳಿಸಿದ್ದೇವು. ನೀರು ಬಿಟ್ಟ ಮೇಲೆ ವಾದ ಮಾಡಿ ಪ್ರಯೋಜನ ಇಲ್ಲ. ಇದೆಲ್ಲವೂ ಕೂಡ ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಅರಿವು ಇರಬೇಕು. ರಾಜ್ಯ ಸರ್ಕಾರದವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಬಳಿ ಹೋಗೋಣ ಎನ್ನುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಮಿಳುನಾಡಿನ ಸಂಸದರ ನಿಯೋಗ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿರುವ ಕುರಿತು ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಂಸದರ ನಿಯೋಗ ಕರೆದುಕೊಂಡು ಹೋಗಲು ಸಮಸ್ಯೆ ಇಲ್ಲ. ಸರ್ಕಾರ ಮುಂದಾಳತ್ವ ವಹಿಸಬೇಕು. ನಿಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಅಫಿಡವಿಡ್ ಹಾಕಿದೆ, ನೀವು ಅದಕ್ಕೆ ಬದ್ದರಾಗಬೇಕಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ವಿಘ್ನನಿವಾರಕನಿಗೆ ರಾಜಕಾರಣಿಗಳ ನಮನ
ಈಗ ಅಫಿಡವಿಟ್ ನಂತರವೂ ನೀರು ಬಿಡಲು ಹೋದರೆ ಸುಳ್ಳು ಹೇಳಿದ ಹಾಗೇ ಆಗುತ್ತದೆ. ಸರ್ಕಾರದ ಪ್ರತಿಯೊಂದು ನಡೆ ರೈತರನ್ನು, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ತಮಿಳುನಾಡು ಸರ್ಕಾರ ನೀರಾವರಿ ಸಚಿವರನ್ನು ಬೇಟಿ ಮಾಡಿದ್ದರೂ ಸಹ, ಯಾವಾಗಲೂ ಅದು ರಾಜ್ಯಕ್ಕೆ ಸಹಕಾರ ನೀಡಿಲ್ಲ, ನೀಡುವುದು ಇಲ್ಲ, ಇದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿ ಕಾರಿದರು.
ಈ ವಿಚಾರದಲ್ಲಿ ವ್ಯರ್ಥ ಮಾತುಕತೆ ಆಗಬಾರದು. ನಮ್ಮ ವಸ್ತು ಸ್ಥಿತಿ ಮಾತ್ರವಲ್ಲ, ತಮಿಳುನಾಡು ತನ್ನ ವಾಸ್ತವ ಸ್ಥಿತಿಯನ್ನು ಯಾವಾಗಲೂ ಮಾತನಾಡಲ್ಲ. ಆ ರಾಜ್ಯದ ಅಣೆಕಟ್ಟಿನ ಪರಿಸ್ಥಿತಿ ಬಗ್ಗೆ ಎಲ್ಲಿವರೆಗೂ ಸರ್ಕಾರ ಮಾತನಾಡಲ್ಲ, ಅಲ್ಲಿಯವರೆಗೂ ಸಮಸ್ಯೆ ಬಗೆಹರಿಯಲ್ಲ. ನಮ್ಮ ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೆ ಏನೂ ಲಾಭ ಇಲ್ಲ ರಾಜ್ಯದ ಹಿತದೃಷ್ಟಿಯಿಂದ ಹೇಳಿದ್ದೇನೆ. ನಮ್ಮ ಕಾಲದಲ್ಲಿ ಯಾವುದೇ ಇಕ್ಕಟ್ಟು, ಬಿಕ್ಕಟ್ಟು ಇರಲಿಲ್ಲ. ನಮ್ಮ ಸಲಹೆಯನ್ನು ತೆಗೆದುಕೊಳ್ಳದೇ ಇದ್ದರೆ ಏನು ಮಾಡಲು ಆಗುತ್ತದೆ ಎಂದು ಬೊಮ್ಮಾಯಿ ಟೀಕಿಸಿದರು.
ಇದನ್ನೂ ಓದಿ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಮೋದಿ ಸರ್ಕಾರ!
ಕೋರ್ಟ್‌ನಿಂದ ಹೊರಗೆ ಬಗೆಹರಿಸಿಕೊಳ್ಳಲು ರಾಜ್ಯಸಭೆಯಲ್ಲಿ ದೇವೇಗೌಡರು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ರಾಜ್ಯಗಳು ಒಪ್ಪಿಕೊಂಡಾಗ ಮಾತ್ರ ಅದು ಸಾಧ್ಯ. ತಮಿಳುನಾಡಿನವರು 35 ವರ್ಷಗಳಿಂದ ಇದೇ ವಾದ ಮಾಡುತ್ತಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಆದ ಮೇಲೆ ಬೇರೆ ಪರಿಸ್ಥಿತಿ ಇದೆ. 2018 ರ ಬಳಿಕ ಮೊದಲ ಬಾರಿಗೆ ನೀರಿನ ಅಭಾವವಾಗಿದೆ. ಸರ್ಕಾರಕ್ಕೆ ಪರೀಕ್ಷೆಯಾಗಿದೆ, ಸರ್ಕಾರ ಚಾಕಚಕ್ಯತೆಯಿಂದ ಬಗೆಹರಿಸಬೇಕು. ನಾವು ಬೇಕಾದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಕೂಡಲೇ ನೀರಾವರಿ ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿ ಹೇಳಬೇಕು ಎಂದು ನಮ್ಮ ಸಂಸದರಿಗೆ ಸೂಚಿಸಿದ್ದೇನೆ. ಮಹಿಳಾ ಮೀಸಲಾತಿಯ ಮಂಡನೆಯ ನಿರ್ಧಾರ ಕ್ರಾಂತಿಕಾರಿ ನಿರ್ಧಾರ ಆಗಿದೆ. ಬಹಳ ದಿನಗಳಿಂದಲೂ ಚರ್ಚೆ ಆಗುತ್ತಿತ್ತು. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ರಾಜ್ಯ ಸಭೆಯಲ್ಲಿ ಮಂಡಿಸಿದ್ದರು, ಆದರೆ ಲೋಕಸಭೆಯಲ್ಲಿ ಆಗಿರಲಿಲ್ಲ. ಆಗ ಹಲವು ಪಕ್ಷಗಳ ವಿರೋಧದಿಂದ ಯುಪಿಎ ಅದರಲ್ಲಿ ಸಕ್ಸಸ್ ಆಗಲಿಲ್ಲ. ಪ್ರಜಾಪ್ರಭುತ್ವದಲ್ಲಿ 50% ಇರುವ ಹೆಣ್ಣುಮಕ್ಕಳಿಗೆ ಸರಿಯಾದ ಪ್ರಾತಿನಿಧ್ಯ ನೀಡುವ ಅಗತ್ಯ ಇದೆ, ಇದನ್ನು ಪ್ರತಿಯೊಬ್ವರು ಸ್ವಾಗತ ಮಾಡಬೇಕು ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.